ಸಾರಾಂಶ
ಗ್ರಾಮ ಲೆಕ್ಕಾಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಕೈಯಲ್ಲಿ ಮೂಲ ಸೌಲಭ್ಯ ನೀಡುವ ತನಕ ಪ್ರಗತಿ ವರದಿ ಕೇಳದಿರಿ, ಗ್ರಾಮ ಲೆಕ್ಕಾಧಿಕಾರಿಗಳನ್ನು ಮನುಷ್ಯರಂತೆ ಕಾಣಿ
ಲಕ್ಷ್ಮೇಶ್ವರ: ಮೂಲಭೂತ ಸೌಕರ್ಯ, ಸೇವಾ ಸೌಲಭ್ಯ ಒದಗಿಸುವುದು ಸೇರಿದಂತೆ ಇತರೆ ಬೇಡಿಕೆ ಈಡೇರಿಸಲು ಆಗ್ರಹಿಸಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಗುರುವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.
ಗ್ರಾಮ ಲೆಕ್ಕಾಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಕೈಯಲ್ಲಿ ಮೂಲ ಸೌಲಭ್ಯ ನೀಡುವ ತನಕ ಪ್ರಗತಿ ವರದಿ ಕೇಳದಿರಿ, ಗ್ರಾಮ ಲೆಕ್ಕಾಧಿಕಾರಿಗಳನ್ನು ಮನುಷ್ಯರಂತೆ ಕಾಣಿ, ಅಂಧ ಶ್ರದ್ಧೆ ಮೆರೆಯದಿರಿ, ಮಾತೃ ಇಲಾಖೆ ಕರ್ತವ್ಯ ಮರೆಯದಿರಿ, ಪ್ರಗತಿ ಕುದುರೆ ಬೆನ್ನತ್ತಿ ಶೂಲಕ್ಕೆ ನಮ್ಮನ್ನು ಸಿಲುಕಿಸದಿರಿ, ನಮ್ಮ ನ್ಯಾಯಯುತ ಬೇಡಿಕೆ ಈಡೇರಲಿ, ಬೇಡಿಕೆ ಈಡೇರುವವರೆಗೆ ಹೋರಾಟ ಎಂಬ ನಾಮಫಲಕಗಳು ರಾರಾಜಿಸುತ್ತಿದ್ದವು.ಈ ವೇಳೆ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಅಧ್ಯಕ್ಷ ಡಿ.ಎಸ್. ಕುಲಕರ್ಣಿ ಮಾತನಾಡಿ, ಇಲಾಖೆಯಿಂದ ಅಭಿವೃದ್ಧಿಪಡಿಸಿದ ಸುಮಾರು 17ಕ್ಕೂ ಹೆಚ್ಚು ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಇದಕ್ಕೆ ಅವಶ್ಯವಿರುವ ಮೊಬೈಲ್, ಲ್ಯಾಪ್ ಟಾಪ್, ಇಂಟರ್ ನೆಟ್ ಸ್ಕ್ಯಾನರ್ ಒದಗಿಸದೆ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಲೆಕ್ಕಾಧಿಕಾರಿಗಳ ಸಾವು ನೋವು ಆಗುತ್ತಿವೆ. ನಾಳೆಯಿಂದ ಜಿಲ್ಲಾ ಕೇಂದ್ರಗಳಲ್ಲಿ ಎಲ್ಲ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಚ್.ಕೃಷ್ಣಮೂರ್ತಿ, ಫಾತಿಮಾ ಪತ್ತೆಖಾನ, ಜಿ.ಡಿ.ಹವಳದ, ಕೆ.ಎನ್. ಪಾಟೀಲ, ಎಸ್.ಬಿ. ಕನೋಜ, ಡಿ.ಎಲ್. ವಿಭೂತಿ, ಆರ್.ಎನ್. ನೆಗಳೂರ, ಬಿ.ವೈ. ಮಲ್ಲಿಗವಾಡ, ಸುಬೇದಖಾನ ಪಠಾಣ, ಅರುಣ ದೊಡ್ಡಮನಿ, ಸುಷ್ಮಾ ವಡಕಪ್ಪನವರ, ನಿರ್ಮಲಾ ಕೊಪ್ಪದಮಠ, ಲಕ್ಷ್ಮೀ ಓಲೇಕಾರ, ತಸ್ಮೀಮ ಮುಲ್ಲಾ ಇದ್ದರು.