ಸಾರಾಂಶ
ಕಾರವಾರ: ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳನ್ನು ಪರಿಹರಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕರ್ತವ್ಯವವನ್ನು ಸ್ಥಗಿತಗೊಳಿಸಿ ತಹಸೀಲ್ದಾರ್ ಕಚೇರಿ ಬಳಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು. ತಹಸೀಲ್ದಾರರ ಮೂಲಕ ಕಂದಾಯ ಸಚಿವರಿಗೆ ಮನವಿ ನೀಡಿದರು.ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ಮುಷ್ಕರ ಆರಂಭವಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡುವಂತೆ ಒತ್ತಾಯಿಸಿದರು.
ಕಂದಾಯ ಇಲಾಖೆಯಿಂದ ನಿರಂತರವಾಗಿ ಸರ್ಕಾರದಿಂದ ಅಭಿವೃದ್ಧಿಪಡಿಸಿರುವ ವೆಬ್, ಮೊಬೈಲ್ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಹಾಗೂ ಸಿ- ವೃಂದದ ನೌಕರರ ಹತ್ತು ಪಟ್ಟು ಕೆಲಸಗಳ ಜವಾಬ್ದಾರಿಯನ್ನು ವಹಿಸುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ನೀಡುವಂತೆ ಕೋರಿದ್ದಾರೆ.ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸುವಂತೆ, ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲ ಅಮಾನತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯುವ ಬಗ್ಗೆ, ಕೆಸಿಎಸ್‌ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು, ಹಾಗೂ ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸೂಕ್ತ ಆದೇಶ ನೀಡುವ ಬಗ್ಗೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.ಈ ಎಲ್ಲ ಬೇಡಿಕೆಗಳು ಈಡೇರುವವರೆಗೆ ಎಲ್ಲ ಬಗೆಯ ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಷನ್ ಅನ್ನು ಸ್ಥಗಿತಗೊಳಿಸಿ, ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗಿದೆ ಎಂದು ಮುಷ್ಕರ ನಿರತ ನೌಕರರು ತಿಳಿಸಿದ್ದಾರೆ.ಶಿರಸಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ಗುರುವಾರ ನಗರದ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೊಬೈಲ್ ಆ್ಯಪ್‌ಗಳ ಮೂಲಕ ಒತ್ತಡ ಹೇರಲಾಗುತ್ತಿದೆ. ಮೂಲ ಸೌಲಭ್ಯಗಳನ್ನು ನೀಡುತ್ತಿಲ್ಲ. ಹಲವು ಸೇವಾ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಪ್ಪುಬಟ್ಟೆಯನ್ನು ಧರಿಸಿ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು ಸೇವೆಯಿಂದ ದೂರ ಉಳಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಅಧ್ಯಕ್ಷ ವಿಜಯ್ ಮಾತನಾಡಿ, ಗ್ರಾಮ ಆಡಳಿತ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶಿಸಬೇಕು, ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ನಮ್ಮ ಮುಷ್ಕರಕ್ಕೆ ಕರ್ನಾಟಕ ರಾಜ್ಯ ನೌಕರರ ಸಂಘದಿಂದಲೂ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು. ಇನ್ನು ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಕಂದಾಯ ಇಲಾಖೆಯ ನೌಕರರ ಸಂಘದಿಂದಲೂ ಬೆಂಬಲ ವ್ಯಕ್ತಪಡಿಸಲಾಗಿದೆ. ಉಪ ತಹಸೀಲ್ದಾರ್ ಡಿ.ಆರ್. ಬೆಳ್ಳಿಮನೆ, ಅಣ್ಣಪ್ಪ ಮಡಿವಾಳ, ಚಿದಾನಂದ, ಗ್ರಾಮ ಆಡಳಿತ ಅಧಿಕಾರಿಗಳು ಮತ್ತಿತರರು ಮುಷ್ಕರದಲ್ಲಿ ಭಾಗವಹಿಸಿದ್ದರು.