ಬ್ಯಾಡಗಿ: ಭೂ-ಸ್ವಾಧೀನ ಪ್ರಕ್ರಿಯೆ ನಿಯಮ ಎಲ್ಲರಿಗೂ ಒಂದೇ, ಆದರೆ ಜಿಲ್ಲಾಡಳಿತ ಕೆಲವೊಬ್ಬರಿಗೆ ವಿನಾಯಿತಿ ತೋರಿದ್ದು, ಇದನ್ನು ದುರುಪಯೋಗಪಡಿಸಿಕೊಂಡ ಕೆಲವು ಕಟ್ಟಡ ಮಾಲೀಕರು ಉದ್ದೇಶಪೂರ್ವಕವಾಗಿ ತೆರವುಗೊಳಿಸದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಅಗಲೀಕರಣ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿ ಈಗಾಗಲೇ 34 ದಿನಗಳು ಕಳೆದರೂ ಕಟ್ಟಡ ತೆರವು ಕಾರ್ಯ ಸಂಪೂರ್ಣಗೊಂಡಿಲ್ಲ. ಇದರಿಂದ ಕಾಮಗಾರಿ ವೇಗ ಕುಂಠಿತಗೊಂಡಿದ್ದು, ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಅನುಮಾನಗಳಿಗೆ ಕಾರಣವಾಗುತ್ತಿದೆ: ಅಧಿಕಾರಿಗಳು ಎಲ್ಲರಿಗೂ ಒಂದೇ ರೀತಿ ನಿಯಮ ಅನ್ವಯಿಸಬೇಕಾಗಿದೆ. ರಸ್ತೆ ಮಧ್ಯದಿಂದ 33 ಅಡಿಗೆ ಭೂ-ಸ್ವಾಧೀನ ನಡೆದಿದ್ದು, ಕೆಲವರು 30 ಅಡಿಗಳಿಗೆ ಸೀಮಿತಗೊಳಿಸಿಕೊಂಡು ಕಟ್ಟಡ ನಿರ್ಮಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಅನುಕಂಪ ತೋರಿ ಕಾಲವಕಾಶ ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವೈಯಕ್ತಿಕ ಹಿತಾಸಕ್ತಿಗಳಿಗೆ ಮಣಿಯದೇ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

33 ಅಡಿ ಕಡ್ಡಾಯ: ರಸ್ತೆ ಅಗಲೀಕರಣಕ್ಕೆ ನಿಗದಿಪಡಿಸಿರುವ 33 ಅಡಿ ಮಿತಿಯನ್ನು ಪಾಲಿಸದೆ ಕೆಲವರು ಕೇವಲ 30 ಅಡಿ ಮಾತ್ರ ಜಾಗ ಬಿಟ್ಟು ಕಟ್ಟಡ ನಿರ್ಮಾಣ ಮಾಡಿಕೊಳ್ಳುತ್ತಿರುವ ಬಗ್ಗೆ ಹಲವರಿಂದ ದೂರುಗಳು ಕೇಳಿ ಬರುತ್ತಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸತ್ಯಾಸತ್ಯತೆ ಪರಿಶೀಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘನೆ ನಡೆದಿರುವುದು ಕಂಡುಬಂದರೆ ತಕ್ಷಣ ಕ್ರಮ ಕೈಗೊಂಡು, ಎಲ್ಲರಿಗೂ ಒಂದೇ ಕಾನೂನು ಮತ್ತು ಒಂದೇ ಅಳತೆ ಅನ್ವಯವಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ರಸ್ತೆ ಅಭಿವೃದ್ಧಿಗೆ ತಡೆ: ಉಪಾಧ್ಯಕ್ಷ ಹರೀಶಕುಮಾರ ರಿತ್ತಿ ಮಾತನಾಡಿ, ಎಲ್ಲರಿಗೂ ಒಂದು ರೀತಿಯ ನಿಯಮ ಜಾರಿಯಾಗಬೇಕು. ಈಗಾಗಲೇ ಹಲವರು ನಿಯಮಾನುಸಾರ ತಮ್ಮ ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಅಂಥವರ ತ್ಯಾಗ ವ್ಯರ್ಥವಾಗದಂತೆ ಅಧಿಕಾರಿಗಳು ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕು. ಒಂದು ವೇಳೆ ಈ ರೀತಿಯ ತಾರತಮ್ಯ ಮುಂದುವರಿದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಮುಂದುವರಿಸಲು ನಾವು ಅವಕಾಶ ನೀಡುವುದಿಲ್ಲ. ಅಗತ್ಯವಿದ್ದರೆ ಹೋರಾಟದ ಹಾದಿ ತುಳಿಯಲಿದ್ದೇವೆ ಎಂದು ಎಚ್ಚರಿಸಿದರು.


ಸಮಾನ ಕ್ರಮ ಜರುಗಿಸಿ:ಪಾಂಡುರಂಗ ಸುತಾರ ಮಾತನಾಡಿ, ರಸ್ತೆ ಅಗಲೀಕರಣ ಯೋಜನೆ ಪೂರ್ಣಗೊಂಡರೆ ಸಂಚಾರ ದಟ್ಟಣೆ ಕಡಿಮೆಯಾಗುವ ಜತೆಗೆ ಪಟ್ಟಣದ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ. ಆದರೆ ಕೆಲವರ ವಿಳಂಬ ಧೋರಣೆಯಿಂದ ಯೋಜನೆಗೆ ಅಡ್ಡಿಯಾಗುತ್ತಿರುವುದು ವಿಷಾದನೀಯ. ಮುಂದೆ ಮಳೆಗಾಲ ಕೂಡಾ ಕಾಮಗಾರಿಗೆ ತಡೆ ಹಾಕಲಿದೆ. ಕೂಡಲೇ ಬಾಕಿ ಉಳಿದಿರುವ ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಕಾಮಗಾರಿಗೆ ವೇಗ ನೀಡಬೇಕು. ಇಲ್ಲವಾದಲ್ಲಿ ಹೋರಾಟ ಸಮಿತಿ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಫರೀದಾಬಾನು ನದೀಮುಲ್ಲಾ, ಗುತ್ತೆಮ್ಮ ಮಾಳಗಿ, ಎಸ್.ಎಚ್. ಅನ್ನಪೂರ್ಣಾ, ಐಶ್ವರ್ಯಾ ಮಡಿವಾಳರ, ಸೈನಾಜ್ ಮೇಡ್ಲೇರಿ, ಸುನಿತಾ ಬದಿ ಉಪಸ್ಥಿತರಿದ್ದರು.