ಸೋಮಸಂದ್ರದಲ್ಲಿ ಡಿ. 27ರಂದು ದೊಡ್ಡಕುರುಬರಹಳ್ಳಿ ನಾಗರಾಜ್ ಸೋಮಸಂದ್ರ ಭೈರಪ್ಪ ಹಾಗೂ ಮುಳವಾಗಲಪ್ಪರ ಮನೆಗೆ ನುಗ್ಗಿ ದೌರ್ಜನ್ಯವೆಸಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೋಲಾರದಲಿತರ ಮೇಲೆ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಿಂಹ ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಕರ್ನಾಟಕ ದಲಿತ ಸಿಂಹ ಸೇನೆ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್ ಮಾತನಾಡಿ, ಕೋಲಾರ ತಾಲೂಕಿನ ಸೋಮಸಂದ್ರದಲ್ಲಿ ಡಿ. 27ರಂದು ದೊಡ್ಡಕುರುಬರಹಳ್ಳಿ ನಾಗರಾಜ್ ಸೋಮಸಂದ್ರ ಭೈರಪ್ಪ ಹಾಗೂ ಮುಳವಾಗಲಪ್ಪರ ಮನೆಗೆ ನುಗ್ಗಿ ದೌರ್ಜನ್ಯವೆಸಗಿದ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಅದೇ ದಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಹಲವಾರು ಬಾರಿ ಇದೇ ರೀತಿ ಜನರ ಮೇಲೆ ದಬ್ಬಾಳಿಕೆ ನಡೆಸಿದ ಉದಾಹರಣೆಗಳಿವೆ. ಆದರೂ ಪೊಲೀಸರು ಆರೋಪಿಯನ್ನು ಬಂಧಿಸದಿರುವ ಕ್ರಮ ಸಾರ್ವಜನಿಕ ವಲಯದಲ್ಲಿ ಶಂಕೆಗೀಡು ಮಾಡಿದೆ. ಆರೋಪಿ ವಿರುದ್ಧ ರೌಡಿಶೀಟ್ ತೆರೆದು ಬಂಧಿಸಬೇಕೆಂದು ಆಗ್ರಹಿಸಿದರು.ಮನವಿಪತ್ರ ಸ್ವೀಕರಿಸಿ ಮಾತನಾಡಿದ ಸಿಆರ್‌ಸಿ ಸೆಲ್ ಡಿವೈಎಸ್ಪಿ ವಸಂತಕುಮಾರ್, ಶೀಘ್ರ ಆರೋಪಿಯನ್ನು ಬಂಧಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಿಂಹ ಸೇನೆ ಜಿಲ್ಲಾ ಉಪಾಧ್ಯಕ್ಷ ಗಟ್ಟಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಚೋಳಘಟ್ಟ ರಾಮಚಂದ್ರಪ್ಪ, ಸಂಚಾಲಕ ಐತರಾಸನಹಳ್ಳಿ ವೆಂಕಟೇಶ್, ಜಿಲ್ಲಾಧ್ಯಕ್ಷ ಹನುಮಾನ್, ಎಸ್.ವಿ.ಗಗನ್, ಸೌಂದರ್ಯ, ಕೃಷ್ಣಪ್ಪ, ಮಂಜುಳ, ಸುಧಾಕರ್, ರಮೇಶ್, ಲೋಕೇಶ್, ವೆಂಕಟಸ್ವಾಮಿ ಇದ್ದರು.