ಧರ್ಮಸ್ಥಳ ಅಪಪ್ರಚಾರ ಖಂಡಿಸಿ ಪ್ರತಿಭಟನೆ

| Published : Aug 19 2025, 01:00 AM IST

ಸಾರಾಂಶ

ರಾಜ್ಯದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡುತ್ತಿರುವ ಹುನ್ನಾರ ಖಂಡಿಸಿ ಸೋಮವಾರ ದಕ್ಷಿಣ ಕನ್ನಡ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡುತ್ತಿರುವ ಹುನ್ನಾರ ಖಂಡಿಸಿ ಸೋಮವಾರ ದಕ್ಷಿಣ ಕನ್ನಡ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಕೊಡಗು ಜಿಲ್ಲೆ ಶನಿವಾರಸಂತೆ ಪಟ್ಟಣದಲ್ಲಿ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಸೋಮವಾರ ಬೆಳಗ್ಗೆ ಗುಡುಗಳಲೆ ಜಂಕ್ಷನ್‍ನಿಂದ ಮುಖ್ಯ ರಸ್ತೆ ಮೂಲಕ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿ ಮಂಟಪದವರೆಗೆ ಮೌನ ಮೆರವಣಿಗೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರರು, ಗೀರಿಶ್‌ ಮಟ್ಟಣ್ಣನವರ್‌ ಮತ್ತು ಮಹೇಶ್‌ ಶೆಟ್ಟಿ ತಿಮರೋಡಿ ಈ ಹಿಂದಿನಿಂದಲೂ ಹಿಂದೂ ದೇವಾಲಯ ಹಾಗೂ ಹಿಂದೂಪರ ಹೋರಾಟಗಾರರನ್ನು ತುಳಿಯಲು ಪ್ರಯತ್ನಿಸಿದ್ದಾರೆ. ಇವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಮಂಡ್ಯ ನಗರದ ವಕೀಲರ ಸಂಘದ ಆವರಣದಲ್ಲಿ ಸೇರಿದ ವಕೀಲರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ "ಧರ್ಮಸ್ಥಳದಲ್ಲಿ ಶವ ಹೂತಿದ್ದೇನೆ ಎಂದು ಆರೋಪಿಸಿರುವ ಮುಸುಕುದಾರಿ ಅನಾಮಿಕನನ್ನು ಮಂಪರು ಪರೀಕ್ಷೆ ನಡೆಸಬೇಕು " ಎಂದು ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಧರ್ಮಸ್ಥಳಕ್ಕೆ ವಿಶ್ವದಾದ್ಯಂತ ಕೋಟ್ಯಂತರ ಭಕ್ತರಿದ್ದು, ಅಲ್ಲಿ ನಡೆಯುತ್ತಿರುವ ಸೇವೆಗಳು ಅವಿಸ್ಮರಣೀಯವಾಗಿದೆ. ಇತ್ತೀಚೆಗೆ ಕೆಲವು ಹಿಂದೂ ವಿರೋಧಿ ಶಕ್ತಿಗಳು ಕ್ಷೇತ್ರಕ್ಕೆ ಕಳಂಕ ತರಲು ಷಡ್ಯಂತ್ರ ರೂಪಿಸಿದ್ದು, ಅನಾಮಿಕ ವ್ಯಕ್ತಿಯ ಹುಚ್ಚಾಟಕ್ಕೆ ರಾಜ್ಯ ಸರ್ಕಾರವು ಸ್ಪಂದಿಸಿ. ಅವನು ತೋರಿದ ಕಡೆ ಗುಂಡಿ ತೋಡಿಸುತ್ತಿರುವುದು ಹಾಸ್ಯಾಸ್ಪದ. ಈತನ ಹಿಂದಿರುವ ವ್ಯಕ್ತಿಗಳ ಕುರಿತು ಸಮರ್ಪಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಓಂ ನಮಃ ಶಿವಾಯ ಉಚ್ಚಾರಣೆ:

ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಷಡ್ಯಂತ್ರ ದೂರವಾಗಿ ಭಕ್ತರಿಗೆ ಶಾಂತಿ-ನೆಮ್ಮದಿ ಲಭಿಸಲಿ, ಭಕ್ತಿ ಹೆಚ್ಚಾಗಲಿ ಎನ್ನುವ ಸಂಕಲ್ಪದೊಂದಿಗೆ ವಿಶ್ವ ಹಿಂದೂ ಪರಿಷತ್‌ ವತಿಯಿಂದ 108 ‘ಓಂ ನಮಃ ಶಿವಾಯ’ ಶಿವ ಪಂಚಾಕ್ಷರಿ ಮಂತ್ರ ಪಠಣ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ವಿಶ್ವ ಹಿಂದು ಪರಿಷತ್‌ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ.ಎಂ.ಬಿ.ಪುರಾಣಿಕ್‌, ಧರ್ಮಸ್ಥಳ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಬೆರಳೆಣಿಕೆ ಮಂದಿಯಿಂದ ಆರಂಭವಾಗಿ ಅನೇಕರು ಅಪಪ್ರಚಾರದಲ್ಲಿ ಸೇರಿಕೊಂಡಿದ್ದಾರೆ. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದರು.

ಉಡುಪಿ ಶ್ರೀಕೃಷ್ಣ ಮಠ, ಕಟೀಲು, ಶಬರಿಮಲೆ ಸೇರಿ ಅನೇಕ ಕ್ಷೇತ್ರಗಳ ವಿರುದ್ಧ ಅಪಪ್ರಚಾರ ನಡೆದಿದ್ದು, ಅದರ ಮುಂದುವರಿದ ಭಾಗವಾಗಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಇಳಿದಿದ್ದಾರೆ. ಈ ಇಕ್ಕಟ್ಟಿನಿಂದ ಪಾರು ಮಾಡುವಂತೆ ದೇವರಲ್ಲೇ ಪ್ರಾರ್ಥಿಸಿದ್ದೇವೆ ಎಂದರು.