ಬಳ್ಳಾರಿ: ನೀಟ್ ಅವಾಂತರಗಳನ್ನು ಖಂಡಿಸಿ ದೆಹಲಿಯಲ್ಲಿ ವಿದ್ಯಾರ್ಥಿ-ಯುವಜನರು ನಡೆಸಿದ ಹೋರಾಟವನ್ನು ಹತ್ತಿಕ್ಕಲು ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, ನೀಟ್ ಪರೀಕ್ಷೆಯ ಅವಾಂತರದಿಂದಾಗಿ ದೇಶದಲ್ಲಿ 20 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವುಗಳಿಗೆ ನ್ಯಾಯ ಸಿಗಬೇಕು ಮತ್ತು ದೇಶದ ಶಿಕ್ಷಣ ವ್ಯವಸ್ಥೆ ಉಳಿಯಬೇಕು ಎಂಬ ಕೂಗಿನೊಂದಿಗೆ ಹೋರಾಟ ನಡೆಸಿದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿ ಆಶ್ರುವಾಯು ಸಿಡಿಸಲಾಗಿದೆ. ನ್ಯಾಯಯುತ ಹೋರಾಟವನ್ನು ಹತ್ತಿಕ್ಕುತ್ತಿರುವ ಸರ್ಕಾರದ ಈ ನಡೆ ಅತ್ಯಂತ ನಾಚಿಕೆಗೇಡಿತನ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಎಐಡಿಎಸ್ಒ ಜಿಲ್ಲಾ ಖಜಾಂಚಿ ಅನುಪಮಾ ಮಾತನಾಡಿ, ಈ ಕೂಡಲೇ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ ಮತ್ತಷ್ಟು ನಿಗಾ ವಹಿಸುವ ಕಾಳಜಿಯನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿ ಮುಖಂಡರಾದ ಅಭಿನಯ, ಎಂ. ಅಮೂಲ್ಯ, ಶಹಜಾದಿ, ಸೋನಂ, ಮಲ್ಲಿಕಾ, ಪವಿತ್ರಾ, ರೇಖಾ, ಮಮತಾ ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.