ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆಸಚಿವ ಆರ್.ಬಿ.ತಿಮ್ಮಾಪೂರ ಅವರ ಮೇಲೆ ಇಲ್ಲಸಲ್ಲದ ಆಧಾರ ರಹಿತ ಆರೋಪಗಳನ್ನು ಹೊರಡಿಸಿ ಅವರ ಘನತೆಗೆ ಕುಂದು ತಂದಿರುವ ಕರ್ನಾಟಕ ರಾಜ್ಯ ವೈನ್ ಮರ್ಚಂಟ್ ಅಸೋಸಿಯೇಶನ್ ಅಧ್ಯಕ್ಷ ಗುರುಸ್ವಾಮಿ ಮತ್ತು ಕಾರ್ಯದರ್ಶಿ ಗೋವಿಂದ ರಾಜ್ ಹೆಗಡೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಮೂಲಕ ಬಂಧಿಸಬೇಕು ಎಂದು ಸಚಿವ ಆರ್.ಬಿ.ತಿಮ್ಮಾಪೂರ ಅಭಿಮಾನಿ ಬಳಗದಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಸಭೆಯಲ್ಲಿ ಒತ್ತಾಯಿಸಲಾಯಿತು.ವಿನಾಕಾರಣ ಅಬಕಾರಿ ಸಚಿವರ ವಿರುದ್ಧ ಆರೋಪ ಮಾಡಿರುವುದರ ಹಿಂದೆ ಕಾಣದ ಕೈಗಳ ಕೈವಾಡವನ್ನು ಹಾಗೂ ಗೋಮುಖ ವ್ಯಾಘ್ರಗಳ ಬಣ್ಣ ಬಯಲು ಮಾಡಬೇಕೆಂದರೇ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ರಾಜ್ಯಪಾಲರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಲಾಯಿತು. ವೈನ್ ಮರ್ಚಂಟ್ ಅಸೋಸಿಯೇಶನ್ ಮೂಲಕ ಸಂಘಟನೆಯನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡುತ್ತಿರುವ ಪದಾಧಿಕಾರಿಗಳ ಮಾತನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಚುನಾವಣಾ ಪ್ರಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವುದು ನಿಜಕ್ಕೂ ದುರದೃಷ್ಟಕರ ಎಂದು ಪ್ರತಿಭಟನಾ ಸಭೆ ನಿರ್ಣಯಿಸಿತು. ಪರಿಶಿಷ್ಟ ಜಾತಿಗೆ ಸೇರಿದ ಅಬಕಾರಿ ಸಚಿವ ತಿಮ್ಮಾಪೂರ ಸರ್ವಜಾತಿ ಸಮುದಾಯಗಳ ನಾಯಕರಾಗಿದ್ದಾರೆ. 35 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಸೇವೆ ಮಾಡಿರುವ ಅವರಿಗೆ ಅವಮಾನ ಮಾಡಲು ಹೊರಟಿರುವ ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮವಾಗಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.