ಚನ್ನಪಟ್ಟಣ: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಬಿಡದಿ-ಹಾರೋಹಳ್ಳಿ ರಸ್ತೆ ಬಂದ್ ಮಾಡಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರ ಬಂಧನ ಖಂಡಿಸಿ ರೈತ ಸಂಘಟನೆಗಳು ನಗರದ ಗಾಂಧಿ ಭವನದ ಬಳಿ ಬೆಂ-ಮೈ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಇತ್ತ ನಗರದ ಪೊಲೀಸ್ ಭವನದಲ್ಲಿದ್ದ ಬಂಧಿತ ರೈತರು ಸಹ ಉಪವಾಸ ಸತ್ಯಾಗ್ರಹ ನಡೆಸಿದರು

ಚನ್ನಪಟ್ಟಣ: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಬಿಡದಿ-ಹಾರೋಹಳ್ಳಿ ರಸ್ತೆ ಬಂದ್ ಮಾಡಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರ ಬಂಧನ ಖಂಡಿಸಿ ರೈತ ಸಂಘಟನೆಗಳು ನಗರದ ಗಾಂಧಿ ಭವನದ ಬಳಿ ಬೆಂ-ಮೈ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಇತ್ತ ನಗರದ ಪೊಲೀಸ್ ಭವನದಲ್ಲಿದ್ದ ಬಂಧಿತ ರೈತರು ಸಹ ಉಪವಾಸ ಸತ್ಯಾಗ್ರಹ ನಡೆಸಿದರು.

ನಗರದ ಗಾಂಧಿಭವನದ ಬಳಿ ಜಮಾಯಿಸಿದ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತರು ರೈತರ ಬಂಧನ ಖಂಡಿಸಿ ಬೆಂ-ಮೈ ಹೆದ್ದಾರಿಯಲ್ಲಿ ಕುಳಿತು ವಾಹನಗಳನ್ನು ತಡೆದದ್ದರಿಂದ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಈ ವೇಳೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಡದಿ ಟೌನ್‌ಶಿಪ್ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರನ್ನು ಏಕಾಏಕಿ ಬಂಧಿಸಿ ಚನ್ನಪಟ್ಟಣದ ಪೊಲೀಸ್ ಭವನಕ್ಕೆ ಕರೆತರಲಾಗಿದೆ. ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ಗೂಂಡಾವರ್ತನೆ ತೋರಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬಂಧಿಸಲಾಗಿದೆ. ಮಹಿಳೆಯರನ್ನು ಅಮಾನೀಯವಾಗಿ ನಡೆಸಿಕೊಂಡು ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರಸ್ತೆ ತಡೆ ನಡೆಸುತ್ತಿದ್ದ ರೈತರನ್ನು ಪೊಲೀಸರು ತೆರವುಗೊಳಿಸಲು ಯತ್ನಿಸಿದರು. ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ನಂತರ ಪ್ರತಿಭಟನಾನಿರತ ರೈತರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆಗೊಳಿಸಿದರು.

ಪೊಲೀಸ್ ಭವನದಲ್ಲೇ ಧರಣಿ: ಇನ್ನು ಬಿಡದಿ ಟೌನ್‌ಶಿಪ್ ಯೋಜನೆ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬಿಡದಿ-ಹಾರೋಹಳ್ಳಿ ರಸ್ತೆ ಬಂದ್ ಮಾಡಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದ ಪೊಲೀಸರು ಶುಕ್ರವಾರ ಸಂಜೆ ನಗರದ ಡಿಎಅರ್ ಮೈದಾನದಲ್ಲಿ ಪೊಲೀಸ್ ಭವನದಲ್ಲಿ ಇರಿಸಿದ್ದರು. ಭವನದಲ್ಲೇ ಕುಳಿತ ರೈತರು ಅಲ್ಲೇ ಉಪವಾಸ ಸತ್ಯಾಗ್ರಹ ನಡೆಸಿದರು. ಶುಕ್ರವಾರ ರಾತ್ರಿ ಊಟ ಮಾಡದೇ ಶನಿವಾರ ಬೆಳಗ್ಗೆ ತಿಂಡಿ ಸಹ ತಿನ್ನದೇ ರೈತರು ಧರಣಿ ನಡೆಸಿದರು.

ಪೊಲೀಸ್ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಅರ್. ಅಂಬೇಡ್ಕರ್ ಭಾವಚಿತ್ರವಿರಿಸಿದ ರೈತರು ಭವನದಲಿ ಧರಣಿ ಕುಳಿತು ಹೋರಾಟ ನಡೆಸಿದರು. ತಮ್ಮ ಬೇಡಿಕೆ ಈಡೇರುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

ಇದೇ ವೇಳೆ ಪೊಲೀಸ್ ಭವನದಲ್ಲಿ ಧರಣಿ ನಡೆಸುತ್ತಿದ್ದ ರೈತರಿಗೆ ಬೆಂಬಲ ಸೂಚಿಸಿ, ರೈತರ ಬಂಧನ ಖಂಡಿಸಿ ನೂರಾರು ರೈತರು ಡಿಎಆರ್ ಮೈದಾನದ ಗೇಟ್ ಹೊರಗಡೆ ನಗರದ ಚರ್ಚ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಪೊಲೀಸ್ ಭವನದ ಬಳಿ ಆಗಮಿಸಿದ ರೈತರನ್ನು ಒಳಗೆ ಹೋಗಲು ಬಿಡದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಭವನದ ಒಳಗೆ ರೈತರು ಉಪವಾಸ ಸತ್ಯಾಗ್ರಹ ನಡೆಸಿದರೆ, ಭವನದ ಹೊರಗಡೆ ಅವರಿಗೆ ಬೆಂಬಲ ಸೂಚಿಸಿ ರೈತರು ಪ್ರತಿಭಟನೆ ನಡೆಸಿದರು.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್ ಭವನದ ಸುತ್ತ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್ಪಿ ಕೆ.ಸಿ.ಗಿರಿ. ವೃತ್ತ ನಿರೀಕ್ಷಕರಾದ ಪ್ರಕಾಶ್, ಶಿವಕುಮಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಬಾಕ್ಸ್...................

ಸ್ಥಳದಲ್ಲೇ ವ್ಯದ್ಯಕೀಯ ತಪಾಸಣೆ

ಇನ್ನು ನಗರದ ಪೊಲೀಸ್ ಭವನದಲ್ಲೇ ರೈತರು ಉಪವಾಸ ಸತ್ಯಾಗ್ರಹ ಮುಂದುವರಿಸಿದ ಹಿನ್ನೆಲೆಯಲ್ಲಿ ಭವನದ ಬಳಿ ವೈದ್ಯಕೀಯ ನೆರವಿಗೆ ಆಂಬ್ಯುಲೆನ್ಸ್ ಸೇವೆ ಕಲ್ಪಿಸಲಾಗಿತ್ತು. ಧರಣಿನಿರತ ಒಂದಿಬ್ಬರು ಮಹಿಳೆಯರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲೆ ಅಲ್ಲೇ ತಪಾಸಣೆ ನಡೆಸಿದ ವೈದ್ಯರು ಚಿಕಿತ್ಸೆ ನೀಡಿದರು.

ಪೊಟೋ೨೬ಸಿಪಿಟಿ೩:

ಚನ್ನಪಟ್ಟಣದ ಡಿಎಅರ್ ಮೈದಾನದಲ್ಲಿರುವ ಪೊಲೀಸ್ ಭವನದ ಗೇಟ್ ಬಳಿ ಜಮಾಯಿಸಿದ ರೈತರು ಪ್ರತಿಭಟನೆ ನಡೆಸಿದರು.