ನೀಟ್‌ ಪರೀಕ್ಷಾ ಹಗರಣ ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

| Published : Jun 13 2024, 12:46 AM IST

ನೀಟ್‌ ಪರೀಕ್ಷಾ ಹಗರಣ ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಐಡಿಎಸ್‌ಒ ರಾಜ್ಯ ಸಮಿತಿ ಸದಸ್ಯ ರವಿಕಿರಣ್‌ ಜೆ.ಪಿ. ಮಾತನಾಡಿ, ಕೇಂದ್ರದಲ್ಲಿ ಎನ್‌ಎಂಸಿ ಜಾರಿ ಮಾಡುವಾಗ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಹೊಸಪೇಟೆ: ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ನಡೆಸುವ ನೀಟ್ ಪರೀಕ್ಷಾ ಹಗರಣದ ಸಮಗ್ರ ತನಿಖೆ ನಡೆಸಬೇಕು ಎಂದು ಆಲ್‌ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಸಂಘಟನೆ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯ ವಿದ್ಯಾರ್ಥಿಗಳು ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಎಐಡಿಎಸ್‌ಒ ರಾಜ್ಯ ಸಮಿತಿ ಸದಸ್ಯ ರವಿಕಿರಣ್‌ ಜೆ.ಪಿ. ಮಾತನಾಡಿ, ಕೇಂದ್ರದಲ್ಲಿ ಎನ್‌ಎಂಸಿ ಜಾರಿ ಮಾಡುವಾಗ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ವೈದ್ಯರು, ಪ್ರೊಫೆಸರ್‌ಗಳು, ತಜ್ಞರಿದ್ದ ಎಚ್‌ಸಿಎಂಐ ಅನ್ನು ರದ್ದುಪಡಿಸಿ ಆರೋಗ್ಯ ವ್ಯವಸ್ಥೆಗೆ ಸಂಬಂಧ ಇಲ್ಲದ ಕಾರ್ಪೊರೇಟ್ ಮನೆತನದ ಒಡೆಯರನ್ನೊಳಗೊಂಡ ಸಮಿತಿಯಾದ ಎನ್‌ಎಂಸಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು. ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದ ಪ್ರವೇಶ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ನೆಪವೊಡ್ಡಿ ಈ ಎನ್‌ಎಂಸಿಯು ಅಖಿಲ ಭಾರತ ಮಟ್ಟದಲ್ಲಿ ಒಂದು ಪ್ರವೇಶ ಪರೀಕ್ಷೆ ಜಾರಿ ಮಾಡಿತು. ಆಗ ನಡೆಯುತ್ತಿದ್ದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ ಸಂಬಂಧಪಟ್ಟವರಿಗೆ ಸೂಕ್ತ ಶಿಕ್ಷೆ ವಿಧಿಸುವ ಬದಲಿಗೆ ಪರೀಕ್ಷಾ ಪದ್ಧತಿ ಬದಲಾಯಿಸುವುದು ಪರಿಹಾರವಲ್ಲ ಎಂದು ನಾವು ಆ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದೆವು. ನಮ್ಮಎಚ್ಚರಿಕೆ ಈಗ ನಿಜವಾಗಿದೆ. ಸರ್ಕಾರದ ನಿಷ್ಕಾಳಜಿ ಮತ್ತು ಪರೀಕ್ಷಾ ವ್ಯವಸ್ಥೆಯ ಸಂಪೂರ್ಣ ವ್ಯಾಪಾರೀಕರಣದಿಂದಾಗಿ, ಇಡೀ ವೈದ್ಯಕೀಯ ಪ್ರವೇಶ ಪರೀಕ್ಷೆ ಕುಸಿತಕ್ಕೊಳಗಾಗುತ್ತಿದೆ ಎಂದು ದೂರಿದರು.

ನೀಟ್ ಫಲಿತಾಂಶದ ಪಾರದರ್ಶಕತೆ ಬಗ್ಗೆ ದೇಶವ್ಯಾಪಿ ವಿದ್ಯಾರ್ಥಿಗಳು ಹಾಗೂ ಪಾಲಕರು ಹಲವಾರು ಪ್ರಶ್ನೆಎತ್ತಿದ್ದಾರೆ. ಜೂ. 14ರಂದು ಪ್ರಕಟವಾಗಲಿದ್ದ ಫಲಿತಾಂಶ ಜೂ.4ರಂದೇ ಏಕೆ ಪ್ರಕಟವಾಯಿತು? ಒಂದೇ ಪರೀಕ್ಷಾ ಕೇಂದ್ರದಲ್ಲಿನ ಆರು ಅಭ್ಯರ್ಥಿಗಳಿಗೆ ಹೇಗೆ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಬಂತು? ಕೆಲವು ವಿದ್ಯಾರ್ಥಿಗಳು ಪಡೆದಿರುವ ಅಂಕಗಳು ಯುಜಿಸಿಯ ಮಾರ್ಗಸೂಚಿಗೆ ತಾಳೆಯಾಗುತ್ತಿಲ್ಲ ಏಕೆ? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಹತ್ತಿರ ಉತ್ತರ ಇಲ್ಲದಾಗಿದೆ ಎಂದರು.

ಯುಜಿಸಿ ಪರೀಕ್ಷಾ ಮಾರ್ಗಸೂಚಿ ಅನ್ವಯ ಅಂಕಗಳನ್ನು ನೀಡಲಾಗಿದ್ದರೆ ಕೆಲವು ವಿದ್ಯಾರ್ಥಿಗಳು ಪಡೆಯಬಹುದಾದ ಅಂಕಗಳೊಂದಿಗೆ ಪ್ರಸ್ತುತ ಕೆಲವು ವಿದ್ಯಾರ್ಥಿಗಳ ಅಂಕಗಳು ಹೊಂದಾಣಿಯಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಅಂಕ ನೀಡಿರುವುದಾಗಿ ಎನ್‌ಟಿಎ ಸಮಜಾಯಿಷಿ ನೀಡಿದೆ. ಆದರೆ ಹೆಚ್ಚುವರಿ ಅಂಕಗಳನ್ನು ನೀಡಿರುವ ಮಾನದಂಡ ಪಕ್ಷಪಾತಿಯಾಗಿದೆ. ಈ ವರ್ಷ ನೀಡಿದ ಮಾರ್ಗಸೂಚಿ ಅನ್ವಯ ಹೆಚ್ಚುವರಿ ಅಂಕಗಳನ್ನು ನೀಡಲು ಅವಕಾಶವಿಲ್ಲ. ಅಲ್ಲದೇ ಪರೀಕ್ಷೆಯ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗಿವೆ. ಆದರೂ ಸಮರ್ಪಕವಾದ ತನಿಖೆ ನಡೆಸಿಲ್ಲ ಎಂಬ ಆರೋಪವು ಇದೆ. ಇದರಿಂದಾಗಿ ವರ್ಷಗಳಗಟ್ಟಲೆ ಪ್ರಾಮಾಣಿಕವಾಗಿ ಓದಿ ನೂರಾರು ಕನಸುಗಳನ್ನು ಕಂಡ ಅಮಾಯಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಇಂದು ಬಲಿಪಶುಗಳಾಗಿದ್ದಾರೆ. ಅಲ್ಲದೇ ಲಂಚ ಕೊಡುವ ಕೋಟ್ಯಧಿಪತಿಗಳ ಮಕ್ಕಳಿಗೆ ವೈದ್ಯಕೀಯ ಸೀಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಪರೀಕ್ಷೆಗಳಲ್ಲಿ ಲಂಚ ಕೊಟ್ಟು ವಂಚಿಸುವ ಅಭ್ಯರ್ಥಿಗಳು ವೈದ್ಯರಾದರೆ ಇಡೀ ಆರೋಗ್ಯ ವ್ಯವಸ್ಥೆಯ ನೀತಿ ನೈತಿಕತೆಯೇ ಬುಡಮೇಲಾಗಿ ದೇಶದ ಬಡಜನತೆ ಆರೋಗ್ಯ ವ್ಯವಸ್ಥೆಯಿಂದ ವಂಚಿತರಾಗುತ್ತಾರೆ. ಕೂಡಲೇ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಯಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಮೊದಲಿನಂತೇ ಸಿಇಟಿ ವ್ಯವಸ್ಥೆಯಡಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶಾತಿ ನೀಡಬೇಕು ಆಗ್ರಹಿಸಿದರು.

ಎಐಡಿಎಸ್‌ಒ ರಾಜ್ಯ ಸಮಿತಿ ಸದಸ್ಯ ಹಾಗೂ ಬಳ್ಳಾರಿ ಜಿಲ್ಲಾ ಖಜಾಂಚಿ ಅನುಪಮಾ ಮತ್ತು ನೀಟ್ ಪರೀಕ್ಷೆಯ ಆಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.