ಕೈಗಾರಿಕೆಯಲ್ಲಿನ ಕಾರ್ಮಿಕರ ಸಾವು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

| Published : May 21 2024, 12:34 AM IST

ಕೈಗಾರಿಕೆಯಲ್ಲಿನ ಕಾರ್ಮಿಕರ ಸಾವು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಂದಾಲ್ ಕಾರ್ಖಾನೆಯಲ್ಲಿ ನಡೆದ ದುರ್ಘಟನೆಯಲ್ಲಿ ಯುವ ಎಂಜಿನಿಯರ್‌ಗಳಾದ ಗಂಟೆ ಜಡೆಪ್ಪ, ಶಿವಮಹಾದೇವ್, ಸುಶಾಂತ್‌ಕೃಷ್ಣ ನೈನಾರು ಮೃತಪಟ್ಟಿದ್ದಾರೆ.

ಸಂಡೂರು: ಜೆಎಸ್‌ಡಬ್ಲು ಕೈಗಾರಿಕಾ ಸಮೂಹ ಸೇರಿದಂತೆ ಇತರೆ ಕೈಗಾರಿಕೆ, ಗಣಿ ಮತ್ತು ರಸ್ತೆ ಅಪಘಾತಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಸಿಐಟಿಯು, ರೈತ, ಮಹಿಳಾ, ದಲಿತ, ಯುವಜನ, ವಿದ್ಯಾರ್ಥಿ ಸಂಘಟನೆಗಳ ಜಂಟಿ ಸಮಿತಿಯಿಂದ ತಾಲೂಕಿನ ತೋರಣಗಲ್ಲಿನ ಜೆಎಸ್‌ಡಬ್ಲು ಸ್ಟೀಲ್ ಪ್ಲಾಂಟ್‌ನ ಹಳೆಗೇಟಿನ ಮುಂದೆ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನಾಕಾರರು ಸೂರ್ಯನಾರಾಯಣರಾವ್ ಭವನದಿಂದ ಜೆಎಸ್‌ಡಬ್ಲು ಸ್ಟೀಲ್ ಪ್ಲಾಂಟ್‌ನ ಹಳೆಗೇಟಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಮನವಿಯನ್ನು ಉಪ ತಹಶೀಲ್ದಾರ್ ದೇಸಾಯಿ ಅವರಿಗೆ ಸಲ್ಲಿಸಿದರು.

ಸಿಐಟಿಯು ಸಮಿತಿ ರಾಜ್ಯ ಕಾರ್ಯದರ್ಶಿ ಎಲ್. ಮಂಜುನಾಥ್, ಜಿಲ್ಲಾ ಸಮಿತಿ ಅಧ್ಯಕ್ಷ ಜೆ. ಸತ್ಯಬಾಬು, ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ ಮುಂತಾದವರು ಮಾತನಾಡಿ, ಕಾರ್ಖಾನೆಗಳಲ್ಲಿ ಕಾರ್ಮಿಕರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮತ್ತು ಅಪಘಾತಗಳಲ್ಲಿ ಮೃತರಾದ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿದರು.

ಮೇ ೫ ರಂದು ಜಿಂದಾಲ್ ಕಾರ್ಖಾನೆಯಲ್ಲಿ ನಡೆದ ದುರ್ಘಟನೆಯಲ್ಲಿ ಯುವ ಎಂಜಿನಿಯರ್‌ಗಳಾದ ಗಂಟೆ ಜಡೆಪ್ಪ, ಶಿವಮಹಾದೇವ್, ಸುಶಾಂತ್‌ಕೃಷ್ಣ ನೈನಾರು ಮೃತಪಟ್ಟಿದ್ದಾರೆ. ಇವರಿಗೆ ಕೆಲಸದ ಅನುಭವದ ಕೊರತೆ ಇದ್ದರೂ ಇವರನ್ನು ಅಪಾಯಕಾರಿ ಕೆಲಸದಲ್ಲಿ ತೊಡಗಿಸಿರುವುದು ಆಡಳಿತ ಮಂಡಳಿಯ ಕಾನೂನು ಉಲ್ಲಂಘನೆಯನ್ನು ದೃಢಪಡಿಸುತ್ತದೆ. ಕಂಪನಿಯ ಮುಖ್ಯಸ್ಥರಾದ ಸಜ್ಜನ್ ಜಿಂದಾಲ್, ಜಿಂದಾಲ್ ಸ್ಟೀಲ್‌ನ ಅಧ್ಯಕ್ಷ ಪಿ.ಕೆ. ಮುರುಗನ್, ಮಾನವ ಸಂಪನ್ಮೂಲದ ಉಪಾಧ್ಯಕ್ಷರಾದ ಸಂಜಯ್ ಹೊಂಡಾ ಅವರನ್ನು ಮುಖ್ಯ ಆರೋಪಿಗಳನ್ನಾಗಿ ಮಾಡಿ, ಅವರ ವಿರುದ್ಧ ಕೇಸನ್ನು ದಾಖಲಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರ ಕಾನೂನುಗಳ ಜಾರಿ ಕುರಿತಂತೆ ಅನೇಕ ಲೋಪಗಳು ಕಂಡುಬರುತ್ತವೆ. ಕಾರ್ಮಿಕರು ದೂರು ನೀಡಿದಲ್ಲಿ, ಭಯವನ್ನು ಸೃಷ್ಟಿಸಿ ದೂರನ್ನು ದುರ್ಬಲಗೊಳಿಸಲಾಗುತ್ತದೆ. ಕಾರ್ಮಿಕರ ಸುರಕ್ಷತೆ, ಸೌಲಭ್ಯ, ವೇತನ, ಆರೋಗ್ಯ ಇತ್ಯಾದಿ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸುತ್ತಿಲ್ಲ. ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳು, ಸ್ಥಳೀಯ ಜನತೆ ಉದ್ಯೋಗದಿಂದ ವಂಚಿತರಾಗಿದ್ದಾರೆ. ಭೂ ಸಂತ್ರಸ್ತರ ಕುಟುಂಬದವರನ್ನು ಅಸೋಸಿಯೇಟ್ ಕಂಪನಿಗಳಲ್ಲಿ ನೇಮಿಸಲಾಗುತ್ತದೆ ಎಂದು ದೂರಿದರು.

ಕಾರ್ಮಿಕರ ಸಮಸ್ಯೆಗಳ ಪರಿಹಾರ ಕುರಿತಂತೆ ಕ್ರಮ ಕೈಗೊಳ್ಳಲು ಕಾರ್ಮಿಕ ಸಂಘಟನೆ, ಜಿಲ್ಲಾಡಳಿತ, ಕೈಗಾರಿಕೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಕೈಗಾರಿಕೆಯ ಮಾಲೀಕರ ಜಂಟಿ ಸಭೆಯನ್ನು ಏರ್ಪಡಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯನ್ನು ಮುಂದುವರೆಸಿದ ಪ್ರತಿಭಟನಾಕಾರರನ್ನು ಬಂಧಿಸಿದ ಪೋಲಿಸರು, ತೋರಣಗಲ್ಲು ಪೋಲಿಸ್ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಅಲ್ತಾಫ್ ಹಾಗೂ ಕಾರ್ಖಾನೆ ಬಾಯ್ಲರ್, ಕೈಗಾರಿಕಾ ಸುರಕ್ಷತೆ ಹಾಗೂ ಸ್ವಾಸ್ಥ ಇಲಾಖೆ ಸಹಾಯಕ ನಿರ್ದೇಶಕ ವರುಣ್‌ರಾಮ್ ಉಪಸ್ಥಿತರಿದ್ದರು.

ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ವಿ.ಎಸ್. ಶಿವಶಂಕರ್, ಎ.ಸ್ವಾಮಿ, ಎಂ.ತಿಪ್ಪೇಸ್ವಾಮಿ, ಎಚ್.ತಿಪ್ಪಯ್ಯ, ಓಬಳೇಶಪ್ಪ, ಚಂದ್ರಕುಮಾರಿ, ಗಾಳಿ ಬಸವರಾಜ, ಪಂಪನಗೌಡ ಕುರೆಕುಪ್ಪ, ಎಚ್.ದುರ್ಗಮ್ಮ, ಯರಿಸ್ವಾಮಿ, ಎಸ್.ಕಾಲುಬಾ, ಅರ್ಜುನ್, ಶಿವರೆಡ್ಡಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.