ಶಿರಹಟ್ಟಿ: ಹಿರಿಯ ಶಾಸಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಅವರ ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಾಲೂಕಿನ ತಂಗೋಡ ಗ್ರಾಮದಲ್ಲಿ ಗುರುವಾರ ಗದಗ- ಹೊನ್ನಾಳಿ ರಾಜ್ಯ ಹೆದ್ದಾರಿ ತಡೆ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.ಈ ವೇಳೆ ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿ ಡಿ.ಕೆ. ಹೊನ್ನಪ್ಪನವರ ಮಾತನಾಡಿ, ಎಚ್.ಕೆ. ಪಾಟೀಲ ಅವರು ಹಲವು ದಶಕಗಳಿಂದ ಪಕ್ಷದ ಸಂಘಟನೆ ಬಲಪಡಿಸುವಲ್ಲಿ, ಜನಪರ ಆಡಳಿತ ನೀಡುವಲ್ಲಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇಂತಹ ಹಿರಿಯ ಹಾಗೂ ಅನುಭವಿ ನಾಯಕರನ್ನು ಸಚಿವ ಸಂಪುಟದಿಂದ ಹೊರಗಿಡುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ನಿರಾಸೆ ಉಂಟುಮಾಡಿದೆ ಎಂದರು.ಎಚ್.ಕೆ. ಪಾಟೀಲ ಅವರು ಜಾತಿ, ಧರ್ಮದ ಭೇದವಿಲ್ಲದೆ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿರುವ ಜಾತ್ಯತೀತ ನಾಯಕರು. ಅವರ ಆಡಳಿತ ಅನುಭವ, ಸರಳತೆ ಹಾಗೂ ಪ್ರಾಮಾಣಿಕತೆ ರಾಜ್ಯದ ಅಭಿವೃದ್ಧಿಗೆ ಅಗತ್ಯವಾಗಿದ್ದು, ಸಚಿವ ಸಂಪುಟದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕಿತ್ತು ಎಂದರು.ಕಾಂಗ್ರೆಸ್ ಮುಖಂಡ ಫಕ್ಕೀರೇಶ ಮ್ಯಾಟಣ್ಣವರ ಮಾತನಾಡಿ, ಸುದೀರ್ಘ ರಾಜಕೀಯ ಅನುಭವ, ಆಡಳಿತದ ದಕ್ಷತೆ ಹಾಗೂ ಪ್ರಾಮಾಣಿಕ ಕಾರ್ಯವೈಖರಿಯಿಂದ ಗುರುತಿಸಿಕೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ಫಕ್ಕೀರೇಶ ನಡುವಿನಕೇರಿ, ಮುತ್ತು ಮುಂಡವಾಡ, ರುದ್ರಗೌಡ ಪಾಟೀಲ, ಶಿವು ಮಠದ, ಕಲ್ಲವೀರಪ್ಪ ಚವಡಾಳ, ಸುರೇಶ ತಳ್ಳಳ್ಳಿ, ಗುಡ್ಡಪ್ಪ ಬ್ಯಾಲಹುಣಸಿ, ಮಾರ್ತಾಂಡಪ್ಪ ಪೆದ್ದರ, ಸಂಜೀವರಡ್ಡಿ ವೆಂಕರಡ್ಡಿ, ನೇಮಣ್ಣ ನಾಯಕ, ಶರಣಪ್ಪ ಬೆಳ್ಳಟ್ಟಿ, ಮುದಕನಗೌಡ ಪಾಟೀಲ, ರಾಜು ಹತ್ತಿಕಾಳ, ಶರಣಪ್ಪ ಬೆಳ್ಳಟ್ಟಿ, ಬಸವರಾಜ ಗೂಳಣ್ಣವರ, ಸಂಗಪ್ಪ ಹುರಕಣ್ಣವರ ಸೇರಿ ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರ


ಮುಂಡರಗಿ: ಹಿರಿಯ ಶಾಸಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದೆ ಜಿಲ್ಲೆಯನ್ನು ಕಡೆಗಣಿಸಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ನೋವುಂಟಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಹೇಮಂತಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ನೂತನ ಸಂಪುಟ ರಚನೆಯಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ ಅವರನ್ನು ವಿಧಾನಸಭೆ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸಂತೋಷ. ಆದರೆ ಎಚ್.ಕೆ. ಪಾಟೀಲ ಅವರು ನೀರಾವರಿ, ಪಂಚಾಯತ್ ರಾಜ್, ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆಗಳ ಸಚಿವರಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜಕೀಯ ಮತ್ತು ಆಡಳಿತಾತ್ಮಕವಾಗಿ ಸುದೀರ್ಘ ಅನುಭವ ಹೊಂದಿರುವ ಪ್ರಬುದ್ಧ ನಾಯಕರನ್ನು ಸಂಪುಟದಿಂದ ಹೊರಗಿಟ್ಟಿರುವುದು ಸರಿಯಾದ ನಿರ್ಧಾರವಲ್ಲ ಎಂದರು.ತಾಲೂಕು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ರಾಜು ಡಾವಣಗೇರಿ ಮಾತನಾಡಿ, ರೋಣ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಭಾಧ್ಯಕ್ಷ ಸ್ಥಾನ ದೊರೆತಿರುವುದು ಅವರ ಹಿರಿತನಕ್ಕೆ ಸಂದ ಗೌರವವಾಗಿದೆ. ಪ್ರಸ್ತುತ ನೂತನ ಸಂಪುಟದಲ್ಲಿ ಶಾಸಕ ಎಚ್.ಕೆ. ಪಾಟೀಲರಿಗೆ ಸೂಕ್ತ ಸ್ಥಾನಮಾನ ಸಿಗದಿರುವುದು ಜಿಲ್ಲೆಯ ಜನತೆಗೆ ಹಾಗೂ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದರು.ಪುರಸಭೆ ಮಾಜಿ ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಆನಂದಗೌಡ ಪಾಟೀಲ ಮುಂಡವಾಡ, ಅಶೋಕ ಹುಬ್ಬಳ್ಳಿ, ರಾಮಚಂದ್ರ ಕಲಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.