ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನಾ ಸಪ್ತಾಹದ ಅಂಗವಾಗಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕಾರವಾರ: ಮಾಸಿಕ ₹15,000 ಗೌರವಧನ ನಿಗದಿಪಡಿಸುವುದು, ಸಮಸ್ತ ಆ್ಯಪ್‌ನಲ್ಲಿ ಮೊಬೈಲ್ ಮೂಲಕ ಕೆಲಸ ಮಾಡುವಂತೆ ಒತ್ತಾಯಿಸದಿರುವುದು ಹಾಗೂ ವೇತನ ಮತ್ತು ಪ್ರೋತ್ಸಾಹಧನವನ್ನು ನಿಯಮಿತವಾಗಿ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಮಂಗಳವಾರ ಕಾರವಾರದಲ್ಲಿ ಪ್ರತಿಭಟನೆ ನಡೆಸಿದರು.ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನಾ ಸಪ್ತಾಹದ ಅಂಗವಾಗಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರ ಗಂಗಾಧರ ಬಡಿಗೇರ ಮಾತನಾಡಿ, ಕಳೆದ 9 ವರ್ಷಗಳಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನದಲ್ಲಿ ಕೇವಲ ₹1,500 ಹೆಚ್ಚಳವಾಗಿದೆ. ಬೆಲೆ ಏರಿಕೆಯ ನಡುವೆ ಕಡಿಮೆ ಗೌರವಧನದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದರು.ರಾಜ್ಯದ ವಿವಿಧ ಭಾಗಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳವಾಗಿದ್ದರೂ, ಕರ್ನಾಟಕದಲ್ಲಿ ದುಡಿದ ವೇತನವೂ ನಿಯಮಿತವಾಗಿ ದೊರೆಯುತ್ತಿಲ್ಲ. ಕಳೆದ ಒಂದು ವರ್ಷದಿಂದ ಪ್ರೋತ್ಸಾಹಧನ ಹಾಗೂ ಗೌರವಧನ ನಿಗದಿತ ಅವಧಿಯಲ್ಲಿ ಪಾವತಿಯಾಗದೆ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲಸ ಮಾಡಿದ ಪ್ರಮಾಣಕ್ಕೆ ತಕ್ಕಂತೆ ಹಣ ದೊರೆಯದೆ ಪ್ರತಿ ತಿಂಗಳು ನಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ನೀಡುವ ಗೌರವಧನ ಹಾಗೂ ಕೇಂದ್ರ ಸರ್ಕಾರದ ಪ್ರೋತ್ಸಾಹಧನವನ್ನು ಒಟ್ಟುಗೂಡಿಸಿ ಕನಿಷ್ಠ ₹15,000 ಮಾಸಿಕ ವೇತನ ನಿಗದಿಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಜಯ್ ದೊಡ್ಮನಿ ಅವರು, ಜಿಲ್ಲಾದ್ಯಂತ ಆಶಾ ಕಾರ್ಯಕರ್ತೆಯರನ್ನು ಸಮಸ್ತ ಆ್ಯಪ್‌ನಲ್ಲಿ ಕೆಲಸ ಮಾಡಲು ಒತ್ತಾಯಿಸದಂತೆ ಕೂಡಲೇ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು. ಉಳಿದ ಸಮಸ್ಯೆಗಳ ಪರಿಹಾರಕ್ಕೂ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಲ್ಲಾಭಕ್ಷ್ ಮಾತನಾಡಿ, ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು ಕೂಡಲೇ ಸಭೆ ಕರೆಯಲಾಗುವುದು. ಸಭೆಗೆ ಬರುವ ಮುನ್ನ ಸಮಸ್ಯೆಗಳ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ವರದಿಯೊಂದಿಗೆ ಹಾಜರಾಗುವಂತೆ ಡಿಎಚ್‌ಒ ಅವರಿಗೆ ಸೂಚಿಸಿದರು.ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷೆ ಪದ್ಮಾ ಚಲುವಾದಿ ವಹಿಸಿದ್ದರು. ಉಪಾಧ್ಯಕ್ಷರಾದ ಕವಿತಾ ಗಾವಡ, ಶ್ವೇತಾ ಕಪಡಸ್ಕರ್, ಮಹಾಲಕ್ಷ್ಮಿ ನಾಯ್ಕ, ಶೋಭಾ ನಾಯ್ಕ, ಕಸ್ತೂರಿ ಮುಂಡಗೋಡ, ನಿವೇದಿತಾ ಕೊಳಂಬಕರ್, ಹಾಲಮ್ಮ ನಾಯ್ಕ, ಆಶಾ ನಾಗೇಕರ್, ಪ್ರಭಾಮಣಿ ವರ್ಧಮಾನ್, ಅಶ್ವಿನಿ ಕಲಾವತಿ ಪಾಟೀಲ್, ವೈಶಾಲಿ, ಪ್ರೀತಿ, ಸಂಗೀತ ಸೇರಿದಂತೆ ಹಲವರು ಭಾಗವಹಿಸಿದ್ದರು.