ಕನ್ನಡಪ್ರಭ ವಾರ್ತೆ ಗೋಕಾಕ
ತಾಲೂಕಿನ ಕೊಣ್ಣೂರು ಗ್ರಾಮದ ಶಿವಾಪೂರ ರಸ್ತೆಯ ಸ.ನಂ.387/ಎ ದಿಂದ ಝಡ್‌ವರೆಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿಗೆ 1938ರಲ್ಲಿ ಉಚಿತವಾಗಿ ನೀಡಿದ್ದ ಜಮೀನುಗಳನ್ನು ಕಬಳಿಕೆ ಮಾಡಿರುವ ಬಾಂಡ್ ರೈಟರ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘಟನೆಗಳು ಶುಕ್ರವಾರ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಿದರು.ಬಾಂಡ್ ರೈಟರ್ ಆನಂದ ಗೋಟಡಕಿ ಹಾಗೂ ಸಹಚರರಾದ ಹೆಬ್ಬಸೂರಿನ ಹನಮಂತ ಲಕ್ಷ್ಮಪ್ಪ ಇಂಗಳಹಳ್ಳಿ, ನರಗುಂದದ ಬಸವರಾಜ ಶ್ರೀಶೈಲ ಗಡೆಕಾರ, ಕುಮಾರಸ್ವಾಮಿ ಮಹಾದೇವಪ್ಪ ಅರಿಕೇರಿ, ನಾಗರಾಜ ಕವಳೆ ಮತ್ತು ನಗರದ ದುಂಡೇಶ ಶಿರಸಂಗಿ ವಿರುದ್ಧ ಗೋಕಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದ್ದು, ಕೆಲವು ಆರೋಪಿತರ ನಿರೀಕ್ಷಣಾ ಜಾಮೀನು ರದ್ದಾಗಿದೆ. ಬೆಳಗಾವಿ ಪೊಲೀಸರು ಆರೋಪಿತರನ್ನು ಈವರೆಗೆ ಬಂಧಿಸಿಲ್ಲ. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪಿಎಸ್‌ಐ ಕೆಂಪಣ್ಣ ಗುಡಜ, ದಲಿತ ಸಂಘಟನೆಗಳ ಮುಖಂಡರಾದ ಅಶೋಕ ಲಗಮಪ್ಪಗೋಳ, ಬಸವರಾಜ ಆರೇನ್ನವರ, ಧನ್ಯಕುಮಾರ ಮೇಗೆರಿ, ಶ್ರೀಕಾಂತ ತಳವಾರ, ಜಯಾನಂದ ಮಾದರ, ಅಶೋಕ ಮೇಸ್ತ್ರಿ, ಸತ್ತೆಪ್ಪ ಕರವಾಡಿ, ಅಜೀತ ಹರಿಜನ, ಈಶ್ವರ ಗುಡಾಜ, ಗಜೇಂದ್ರ ಕಂದಪ್ಪಗೋಳ, ಸುರಜ ಹಿರಗನ್ನವರ ಸೇರಿ ಹಲವರು ಇದ್ದರು.