ನದಿಗೆ ಕಲ್ಮಷನೀರು, ಕಾರ್ಖಾನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

| Published : May 22 2024, 12:45 AM IST

ಸಾರಾಂಶ

ತುಂಗಭದ್ರಾ ನದಿಗೆ ರಾಸಾಯನಿಕ ಕಲ್ಮಷಯುಕ್ತ ನೀರನ್ನು ಹರಿಬಿಟ್ಟಿರುವ ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಘದ ನೇತೃತ್ವದಲ್ಲಿ ನೂರಾರು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ತುಂಗಭದ್ರಾ ನದಿಗೆ ರಾಸಾಯನಿಕ ಕಲ್ಮಷಯುಕ್ತ ನೀರನ್ನು ಹರಿಬಿಟ್ಟಿರುವ ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಘದ ನೇತೃತ್ವದಲ್ಲಿ ನೂರಾರು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ರೈತ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನ ಹನುಮನಹಳ್ಳಿ ಹಾಗೂ ತೆರದಹಳ್ಳಿ ಬಳಿಯಿರುವ ಗೋಲ್ಡನ್ ಹ್ಯಾಚರೀಸ್‌ನ ಗ್ರೀನ್ ಎನರ್ಜಿ ಬಯೋ ರಿಪೈನ್‌ರಿಸ್‌ ಕಂಪನಿಯು ರಾಸಾಯನಿಕ ಕಲ್ಮಷಯುಕ್ತ ನೀರನ್ನು ಕುಮದ್ವತಿ ನದಿ ಒಡಲಿಗೆ ಬಿಟ್ಟು ತಾಲೂಕಿನ ಜನರ ಜೀವನ ಜೊತೆ ಚೆಲ್ಲಾಟವಾಡುತ್ತಿದೆ. ಕಂಪನಿಯವರು ಎಲ್ಲ ಗೊತ್ತಿದ್ದರೂ ಗೊತ್ತಿಲ್ಲದಂಗೆ ನಾಟಕವಾಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ಜರುಗಿಸಬೇಕಾಗಿದ್ದ ಜಿಲ್ಲಾಡಳಿತ ಮತ್ತು ಪರಿಸರ ಮಾಲಿನ್ಯ ಮಂಡಳಿಯ ನಿರ್ಲಕ್ಷ್ಯದಿಂದ ಕಳೆದ ಕೆಲವು ತಿಂಗಳಿಂದ ರಾಸಾಯನಿಕಯುಕ್ತ ನೀರು ತುಂಗಭದ್ರಾ ನದಿ ಸೇರುತ್ತ ಬಂದಿದೆ. ಈ ನೀರನ್ನೆ ಜನರಿಗೆ ಸರಬರಾಜು ಮಾಡುತ್ತಾ ಬಂದಿರುವುದು ಸರ್ವೆ ಸಾಮಾನ್ಯವಾಗಿದೆ. ಇಷ್ಟು ವರ್ಷಗಳಿಂದ ಜಿಲ್ಲಾಡಳಿತ ಕಾರ್ಖಾನೆಯ ಕಲುಷಿತ ನೀರನ್ನು ಜನರಿಗೆ ಸರಬರಾಜು ಮಾಡುತ್ತಾ ಬಂದಿರುವುದು ಆತಂಕದ ವಿಷಯವಾಗಿದೆ. ಇನ್ನು ಎರಡ್ಮೂರು ದಿನದಲ್ಲಿ ಶಿವಮೊಗ್ಗದಿಂದ ತುಂಗಭದ್ರಾ ನದಿಗೆ ನೀರು ಹರಿದು ಬರುವ ಸಾಧ್ಯತೆಗಳಿದ್ದು, ರಾಣಿಬೆನ್ನೂರು ತಾಲೂಕು ಮಾತ್ರವಲ್ಲದೇ ಇಡೀ ಹಾವೇರಿ ಜಿಲ್ಲೆಗೆ ಕುಡಿಯುವ ನೀರು ಕಲುಷಿತವಾಗುವ ಸಾಧ್ಯತೆಯಿದೆ. ಆದ್ದರಿಂದ ತಕ್ಷಣವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮೊದಲನೆಯ ಆದ್ಯತೆ ಮೇರೆಗೆ ತೆಗೆದುಕೊಂಡು ಕಲುಷಿತ ನೀರನ್ನು ತೆಗೆಯಲು ಅಗತ್ಯ ಕ್ರಮ ಜರುಗಿಸಬೇಕು. ಇದಕ್ಕೆ ಕಾರಣರಾಗಿರುವ ಕಂಪನಿಯ ಮಾಲೀಕರು ಹಾಗೂ ವ್ಯವಸ್ಥಾಪಕರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಕಾನೂನಿನ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಎಸಿ ಸಿ. ಚನ್ನಪ್ಪ ನೀರನ್ನು ತ್ವರಿತಗತಿಯಲ್ಲಿ ತೆಗೆಯಲಾಗುವುದು. ಶ್ರೀಘ್ರದಲ್ಲಿ ವರದಿ ಸಲ್ಲಿಸಿ ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಎನ್. ನಾಯಕ್, ಮುಖಂಡರಾದ ಜಗದೀಶ ಬಳ್ಳಾರಿ, ಪ್ರಕಾಶ ಶಿರಗೇರಿ, ಬಸಪ್ಪ ಬಾರ್ಕಿ, ತಿಪ್ಪಣ್ಣ ಪೂಜಾರ, ಮಹದೇವಪ್ಪ ಇಂಗಳಗೊಂದಿ, ಬಸವನಗೌಡ ದೊಡಗೌಡ್ರ, ಹಾಲೇಶ ಬುಳ್ಳಪುರ, ನಾಗರಾಜ ಪೂಜಾರ, ಹನುಮಂತಪ್ಪ ಹೊಸಪೇಟೆ, ಸುಭಾಶ ಶೀರಗೇರಿ ಮತ್ತಿತರರಿದ್ದರು.