ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ

| Published : Aug 24 2025, 02:00 AM IST

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಪಪ್ರಚಾರ ಮಾಡುವ ಮುಸುಕುದಾರಿ ವ್ಯಕ್ತಿ, ಮಟ್ಟೆಣ್ಣವರ, ಸಮೀರ್, ಸುಜಾತಾ ಭಟ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹಾವೇರಿ: ಧರ್ಮಸ್ಥಳ ಪುಣ್ಯಕ್ಷೇತ್ರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ, ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸುವಂತೆ ಆಗ್ರಹಿಸಿ ಬಿಜೆಪಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಬಿಜೆಪಿ ಘಟಕ ಕರೆ ನೀಡಿದ್ದ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಘೋಷಣೆಯೊಂದಿಗೆ ಶನಿವಾರ ಹಾವೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಪುರಸಿದ್ದೇಶ್ವರ ದೇವಸ್ಥಾನ ಬಳಿ ಜಮಾವಣೆಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹುಕ್ಕೇರಿಮಠ ರಸ್ತೆ, ಎಂ.ಜಿ. ರಸ್ತೆ, ಮಹಾತ್ಮ ಗಾಂಧಿ ವೃತ್ತ, ಹಳೆ ಕೋರ್ಟ್, ಹಳೆ ಪುರಸಭೆ ರಸ್ತೆ ಮಾರ್ಗವಾಗಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತವನ್ನು ಬಂದು ತಲುಪಿದರು.

ಪಾದಯಾತ್ರೆಯಲ್ಲಿ ಅಪಪ್ರಚಾರ ಮಾಡುತ್ತಿರುವ ಯೂಟ್ಯೂಬರ್, ಪೂರ್ವಾಪರ ಯೋಚನೆ ಮಾಡದೆ ಎಸ್‌ಐಟಿ ತನಿಖೆ ರಚನೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುವ ಕೆಲಸವನ್ನು ಸರ್ಕಾರಕ್ಕೂ ಮಾಡಲಿಕ್ಕೆ ಆಗುವುದಿಲ್ಲ. ಮಹಿಳೆಯರ ಸಬಲೀಕರಣಕ್ಕೆ ಸಾಲ, ಶಿಕ್ಷಣಕ್ಕೆ ಉತ್ತೇಜನ, ಆರೋಗ್ಯಕ್ಕೆ ವೈದ್ಯಕೀಯ ಸೇವೆ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ನೀಡಲು ಕಟಿಬದ್ಧವಾಗಿದೆ. ಇದನ್ನು ಸಹಿಸದ ಸರ್ಕಾರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿದೆ. ಅಪಪ್ರಚಾರ ಮಾಡುವ ಮುಸುಕುದಾರಿ ವ್ಯಕ್ತಿ, ಮಟ್ಟೆಣ್ಣವರ, ಸಮೀರ್, ಸುಜಾತಾ ಭಟ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೆ, ಗೃಹ ಸಚಿವರೇ ನಿಮಗೇನಾದರೂ ವಿವೇಚನೆ ಇದ್ದರೆ ಪ್ರಕರಣವನ್ನು ಎಸ್ಐಟಿ ಬದಲಿಗೆ ಎನ್ಐಎ ತನಿಖೆಗೆ ಒಳಪಡಿಸಿ. ಅಪಪ್ರಚಾರ ಮಾಡುವ ಯೂಟ್ಯೂಬರ್‌ಗಳಿಗೆ ವಿದೇಶದಿಂದ ಅಕ್ರಮ ಹಣ ಬರುವ ಸಂಶಯವಿದ್ದು, ಇದನ್ನು ತನಿಖೆ ನಡೆಸಬೇಕು. ಎಲ್ಲರಿಗೂ ಮಂಪರು ಪರೀಕ್ಷೆ ಮಾಡಿಸಿ ಸತ್ಯಾಸತ್ಯತೆ ಹೊರಗೆಳೆಯಬೇಕು. ಧರ್ಮದ ಮೇಲೆ ನಂಬಿಕೆ ಇಟ್ಟಿರುವ ಧರ್ಮಸ್ಥಳ ಭಕ್ತರಿಗೆ ನ್ಯಾಯ ಒದಗಿಸಬೇಕು ಎಂದರು.ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಭಾರತದಲ್ಲಿಯೇ ಪವಿತ್ರವಾದ ದೇವಸ್ಥಾನ. ಧರ್ಮಸ್ಥಳದಲ್ಲಿ ನಿಷ್ಠೆ, ಶಕ್ತಿ ಇರುವ ನಂಬಿಕೆ ಜನರಲ್ಲಿದೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ದಿಟ್ಟ ಕ್ರಾಂತಿ ಮಾಡಿದೆ. ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಎಡಪಂಥೀಯ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಧರ್ಮಸ್ಥಳಕ್ಕೆ ಅಪಖ್ಯಾತಿ ತರುವ ತಿಮರೋಡಿ, ಮಟ್ಟೆಣ್ಣವರ, ಸಮೀರ್, ಜಯಂತ್, ಸುಜಾತರಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ರಾಜೇಂದ್ರ ಹಾವೇರಣ್ಣನವರ, ಜಿಲ್ಲಾ ಕಾರ್ಯದರ್ಶಿ ಸಂತೋಷ ಆಲದಕಟ್ಟಿ, ವಕ್ತಾರ ಪರಮೇಶ್ವರಪ್ಪ ಮೇಗಳಮನಿ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕಳಸೂರ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೆರ, ರುದ್ರೇಶ ಚಿನ್ನಣ್ಣನವರ, ರಮೇಶ ಪಾಲನಕರ, ಕಿರಣ್ ಕೊಳ್ಳಿ, ಅಭಿಷೇಕ್ ಗುಡಗೂರ, ಕಿರಣ ಕೋಣನವರ, ವೀರಣ್ಣ ಅಂಗಡಿ, ಸತೀಶ ಗೌಳಿ, ಮೃತ್ಯುಂಜಯ ಮುಷ್ಠಿ, ಕೆ.ಸಿ. ಕೋರಿ, ನಿಖಿಲ್ ಹಿರೇಮಠ, ಶಿವಯೋಗಿ ಹುಲಿಕಂತಿಮಠ, ವೆಂಕಟೇಶ ಜರತಾರಘರ, ವಿಜಯಕುಮಾರ ಚಿನ್ನಿಕಟ್ಟಿ, ನೀಲಪ್ಪ ಚಾವಡಿ, ನಿಖಿಲ್ ಡೊಗ್ಗಳ್ಳಿ, ಲಲಿತಾ ಗುಂಡೇನಹಳ್ಳಿ, ಚನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ, ಪುಷ್ಪಲತಾ ಚಕ್ರಸಾಲಿ ಇತರರು ಇದ್ದರು.