ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್‌ಗಳಿಗೆ ಗ್ರಾಮದಲ್ಲಿ ನಿಲುಗಡೆ ನೀಡುವಂತೆ ಒತ್ತಾಯಿಸಿ ಸಮೀಪದ ಎಂ.ಜಿ. ತಿಮ್ಮಾಪುರ ಗ್ರಾಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶನಿವಾರದಂದು ಸಾರಿಗೆ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಗುತ್ತಲ: ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್‌ಗಳಿಗೆ ಗ್ರಾಮದಲ್ಲಿ ನಿಲುಗಡೆ ನೀಡುವಂತೆ ಒತ್ತಾಯಿಸಿ ಸಮೀಪದ ಎಂ.ಜಿ. ತಿಮ್ಮಾಪುರ ಗ್ರಾಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶನಿವಾರದಂದು ಸಾರಿಗೆ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮದಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾವೇರಿ, ರಾಣಿಬೆನ್ನೂರ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳುತ್ತಾರೆ. ಆದರೆ ಸಮರ್ಪಕ ಬಸ್ ಸೌಲಭ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ಹಲವು ಬಸ್‌ಗಳು ಗ್ರಾಮದಲ್ಲಿ ನಿಲುಗಡೆ ನೀಡದೆ ತೆರಳುತ್ತಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಿಕ್ಷಣ ಸಂಸ್ಥೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಬಸ್‌ಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವೊಮ್ಮೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.ಹೀಗಾಗಿ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಕೂಡಲೇ ಎಂ.ಜಿ. ತಿಮ್ಮಾಪುರ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಿಗೆ ಗ್ರಾಮದಲ್ಲಿ ಕಡ್ಡಾಯವಾಗಿ ನಿಲುಗಡೆ ನೀಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ರಾಣಿಬೆನ್ನೂರ ಹಾಗೂ ಗುತ್ತಲ ಸಾರಿಗೆ ಇಲಾಖೆ ಅಧಿಕಾರಿಗಳಾದ ರಮೇಶ ಮಾಳನಾಯಕನಹಳ್ಳಿ ಮತ್ತು ಮಂಜುನಾಥ ಸ್ವಾದಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳತ್ತೇವೆ ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಹೆಚ್ಚುವರಿ ಬಸ್ ಬಿಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡತ್ತೇವೆ ಎಂದು ಪ್ರತಿಭಟನಾಕಾರರನ್ನು ಮನವೊಲಿಸಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಇದ್ದರು.