ಸಾರಾಂಶ
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಚಿಕ್ಕಡಂಕನಕಲ್ ಪಂಚಾಯಿತಿ ವ್ಯಾಪ್ತಿಯ ಹಿರೇಡಂಕನಕಲ್ ಮತ್ತು ಬಸವೇಶ್ವರ ಕ್ಯಾಂಪ್ ಕೂಲಿಕಾರರು ಕೆಲಸ ಮಾಡಿದ್ದಾರೆ. ಮಾಡಿದ ಕೆಲಸಕ್ಕೆ ಜೆಇ ಕಡಿಮೆ ಕೂಲಿ ಹಾಕಿ ಅನ್ಯಾಯ ಮಾಡಿದ್ದಾರೆ.
ಕನಕಗಿರಿ/ನವಲಿ:
ತಾಲೂಕಿನ ಚಿಕ್ಕಡಂಕನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಡಂಕನಕಲ್, ಬಸವೇಶ್ವರ ಕ್ಯಾಂಪ್ ಕಾರ್ಮಿಕರಿಗೆ ಖಾತ್ರಿಯಡಿ ಕಡಿಮೆ ಹಣ ಹಾಕಿರುವುದನ್ನು ಖಂಡಿಸಿಗ್ರಾಮ ಪಂಚಾಯಿತಿ ಕಚೇರಿ ಎದುರು ಕಾರ್ಮಿಕರು ಶನಿವಾರ ಪ್ರತಿಭಟನೆ ನಡೆಸಿದರು.
ಕಾರ್ಮಿಕ ಮುಖಂಡ ಬಾಳಪ್ಪ ಗದ್ದಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಚಿಕ್ಕಡಂಕನಕಲ್ ಪಂಚಾಯಿತಿ ವ್ಯಾಪ್ತಿಯ ಹಿರೇಡಂಕನಕಲ್ ಮತ್ತು ಬಸವೇಶ್ವರ ಕ್ಯಾಂಪ್ ಕೂಲಿಕಾರರು ಕೆಲಸ ಮಾಡಿದ್ದಾರೆ. ಮಾಡಿದ ಕೆಲಸಕ್ಕೆ ಜೆಇ ಕಡಿಮೆ ಕೂಲಿ ಹಾಕಿ ಅನ್ಯಾಯ ಮಾಡಿದ್ದಾರೆ. ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಕೂಲಿಕಾರರಿಗೆ ₹ 370 ಕೂಲಿ ನಿಗದಿಪಡಿಸಿದ್ದರೂ ಜೆಇ ಅಧ್ಯಕ್ಷರು ಮತ್ತು ಪಿಡಿಒಗಳು ಕೂಲಿಕಾರರಿಗೆ ಕಡಿಮೆ ಕೂಲಿ ಹಾಕಿದ್ದಾರೆ ಎಂದು ಆರೋಪಿಸಿದರು.ಖಾತ್ರಿಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಪೂರ್ಣ ಪ್ರಮಾಣ ಕೂಲಿ ಹಣ ಪಾವತಿಸಬೇಕು. ವಿಭಾಗ ಮಾಡಿದ ಜಾಬ್ ಕಾರ್ಡ್‌ಗಳಿಗೆ ಆಧಾರ ಸ್ವಿಪ್ಟಿಂಗ್ ಮಾಡಬೇಕು. ದನದ ಶೆಡ್ ಮಾಡಿಕೊಂಡ ಅರ್ಹ ಫಲಾನುಭವಿಗಳಿಗೆ ಹಣ ಪಾವತಿಸಬೇಕು. ಖಾತ್ರಿ ಕೆಲಸದ ವೇಳೆ ಆಕಸ್ಮಿಕವಾಗಿ ಸಾವಿಗೀಡಾದ ಹನುಮಂತಪ್ಪ ಬಾಗಪ್ಪ ಆದಾಪೂರಗೆ ಕೂಡಲೇ ಪರಿಹಾರ ನೀಡಬೇಕು. ಕಾರ್ಮಿಕ ದುರುಗಪ್ಪ ಈಶಪ್ಪ ಕಾಲು ಮುರಿದಿದ್ದು, ಇವರಿಗೂ ಪರಿಹಾರ ನೀಡಬೇಕು ಹಾಗೂ ಕಾಯಕ ಬಂಧುಗಳಿಗೆ ಪ್ರೋತ್ಸಾಹಧನ ವಿತರಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನಾ ಸ್ಥಳಕ್ಕೆ ತಾಪಂ ಸಹಾಯಕ ನಿರ್ದೇಶಕಿ ಶರಪೋನ್ನಿಸಾಬೇಗಂ ಭೇಟಿ ನೀಡಿ ಮನವಿ ಸ್ವೀಕರಿಸಿ, ಪ್ರತಿಭಟನಾಕಾರರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.
ಈ ವೇಳೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ, ರಮೇಶ ಬಿ, ಹುಸೇನಪ್ಪ ಕೆ, ಮರಿನಾಗಪ್ಪ ಡಗ್ಗಿ, ಬಾಲಪ್ಪ, ಪಂಪಾಪತಿ, ಯಮನೂರಪ್ಪ ಕುಂಬಾರ, ಕರಿಯಪ್ಪ ಬೋವಿ, ದೇವೇಂದ್ರಪ್ಪ ಹಡಪದ ಸೇರಿದಂತೆ ಖಾತ್ರಿ ಕೂಲಿಕಾರರು ಇದ್ದರು.