ಸಾರಾಂಶ
ಕನ್ನಡಪ್ರಭ ವಾರ್ತೆ ಹನುಮಸಾಗರ
ಕಳೆದ ಐದು ದಿನಗಳಿಂದ ನೀರು ಬರುತ್ತಿಲ್ಲ ಎಂದು ಆರೋಪಿಸಿ ಸಮೀಪದ ವೆಂಕಟಾಪುರ ಗ್ರಾಮಸ್ಥರು ತುಮರಿಕೊಪ್ಪ ಗ್ರಾಪಂ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.ಗ್ರಾಮಕ್ಕೆ ಜೆಜೆಎಂ ಕುಡಿಯುವ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಪೈಪ್‌ಲೈನ್ ಅಳವಡಿಸಿದ್ದು, ನಲ್ಲಿಗಳು ಕಿತ್ತು ಹೋಗಿವೆ. ನೀರು ಬಿಡುತ್ತಿಲ್ಲ ಯಾಕೆ ಎಂದು ಜೆಜೆಎಂನವರಿಗೆ ಕೇಳಿದರೆ ನಮಗೆ ಪದೇ ಪದೇ ಯಾಕೆ ಫೋನ್ ಮಾಡುತ್ತಿರಿ ಎನ್ನುತ್ತಾರೆ. ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ. ನೀರುಘಂಟಿಯವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಂದು ಕಿಮೀ ದೂರದಿಂದ ಮಹಿಳೆಯರು, ಮಕ್ಕಳು ನೀರು ತರಬೇಕು. ಇದರಿಂದ ಕೆಲ ಗರ್ಭಿಣಿಯರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಗ್ರಾಮದಲ್ಲಿ ಸ್ವಚ್ಛತೆ ಮರಿಚೀಕೆಯಾಗಿದೆ, ರಸ್ತೆ ಬದಿಯಲ್ಲಿ ಕಸ ಬಿದ್ದಿದೆ. ಗ್ರಾಮವನ್ನು ಬಹಿರ್ದೆಸೆ ಮುಕ್ತ ಎಂದು ಘೋಷಣೆ ಮಾಡಿದ್ದು, ಇದು ಹೆಸರಿಗೆ ಮಾತ್ರ ಸೀಮಿತವಾಗಿದೆ. ಸಮಸ್ಯೆ ತಿಳಿದುಕೊಳ್ಳಲು ಗ್ರಾಮದಲ್ಲಿ ಮೂರ್ನಾಲ್ಕು ವರ್ಷಗಳಿಂದ ವಾರ್ಡ್ ಹಾಗೂ ಗ್ರಾಮ ಸಭೆ ನಡೆಸಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.ಗ್ರಾಮಸ್ಥರಾದ ಹೋಳಿಯಪ್ಪ ಹಟ್ಟಿ, ಮಂಜುನಾಥ ಹೊನ್ನೂರು, ಶಿವಕುಮಾರ ಸಾರಂಗಮಠ, ಮೌನೇಶ ಬಡಿಗೇರ, ನಾಗರಾಜ ಹೊಸೂರು, ಮಲ್ಲಪ್ಪ ಲಕ್ಕಲಕಟ್ಟಿ, ಶರಣಮ್ಮ ಲಕ್ಕಲಕಟ್ಟಿ, ಶಶಿಕಲಾ ಡ್ರೈವರ್, ಮಹಾಲಕ್ಷ್ಮಿ ಗೊಲ್ಲರ, ಹನುಮಂತ ಗೊಲ್ಲರ, ಜಜತ್ತ ಗಿರಿ, ಜತ್ತಗಿರಿ ರಾಠೋಡ, ಸುರೇಶ ನಾಯ್ಕ ಇತರರಿದ್ದರು.