ತಾನು ಅರಮನೆ ಇದ್ದರೂ ನೆರೆಮನೆ ಅವಶ್ಯವಾಗುತ್ತದೆ ಎನ್ನುವುದನ್ನು ಬಾಂಗ್ಲಾ ಸರ್ಕಾರ ಮರೆತಂತಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು.

ಮುಂಡರಗಿ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯ ತಕ್ಷಣವೇ ನಿಲ್ಲಿಸಬೇಕು ಎಂದು ವಿಶ್ರಾಂತ ಶಿಕ್ಷಕ ಎಸ್.ಆರ್. ರಿತ್ತಿ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಸೋಮವಾರ ಪಟ್ಟಣದಲ್ಲಿ ಹಿಂದೂ ರಾಷ್ಟ್ರ ಸಂಕಲ್ಪ ಸಮಿತಿ ಕರ್ನಾಟಕ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಆಶ್ರಯದಲ್ಲಿ ಬಾಂಗ್ಲಾದೇಶದಲ್ಲಿ ಹಿಂದುಗಳ ಸುರಕ್ಷತೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಆಗ್ರಹಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ತಹಸೀಲ್ದಾರರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಅನೇಕ ಬಾರಿ ಪ್ರಕೃತಿವಿಕೋಪಗಳಾದಾಗ, ಪ್ರವಾಹ ಬಂದಾಗ, ಬಿರುಗಾಳಿಗೆ ತುತ್ತಾದಾಗಲೆಲ್ಲ ಮೊದಲು ಸಹಾಯಹಸ್ತವನ್ನು ಚಾಚುವುದೇ ಭಾರತ ಸರ್ಕಾರ. ಬನ್ನು ತಿನ್ನಲು ಗತಿಯಿಲ್ಲದವರ ಕೈಯಲ್ಲಿ ಗನ್ನು ಕೊಟ್ಟರೆ ಏನಾಗುತ್ತದೆ ಎನ್ನುವುದನ್ನು ಬಾಂಗ್ಲಾ ಪರಿಸ್ಥಿತಿ ಹೇಳುತ್ತಿದೆ. ಕಿತ್ತು ತಿನ್ನುವ ಬಡತನವಿದ್ದರೂ ಮತಾಂಧ ವಿಚಾರಗಳನ್ನು ಯುವ ಸಮೂಹದಲ್ಲಿ ಬಿತ್ತಿ ಈ ಪ್ರಪಂಚವೇ ನಾಚಿಕೆಗೇಡು ಪಡುವಂತಹ ಸನ್ನಿವೇಶವನ್ನು ಅಲ್ಲಿನ ಸಮಾಜ ನಿರ್ಮಾಣ ಮಾಡಿದೆ ಎಂದರು.

ಧರ್ಮನಿಂದನೆ ಮಾಡಿದ್ದಾರೆನ್ನುವ ನಿರಾಧಾರದ ಸುಳ್ಳುಆರೋಪ ಮಾಡಿ ಹಿಂದೂಗಳ ಮೇಲೆ ದೌರ್ಜನ್ಯ ವೆಸಗುತ್ತಿರುವುದು ಸರಿಯಾದುದಲ್ಲ. ತಾನು ಅರಮನೆ ಇದ್ದರೂ ನೆರೆಮನೆ ಅವಶ್ಯವಾಗುತ್ತದೆ ಎನ್ನುವುದನ್ನು ಬಾಂಗ್ಲಾ ಸರ್ಕಾರ ಮರೆತಂತಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ, ಸಂಘಟಕ ದೇವಪ್ಪ ಇಟಗಿ ಮಾತನಾಡಿ, ಕಳೆದ ಕೆಲವು ದಿನಗಳಿಂದ ನಮ್ಮ ನೆರೆಯ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದೌರ್ಜನ್ಯ, ಹಿಂಸಾಚಾರ, ಆಸ್ತಿ- ಪಾಸ್ತಿ ಹಾನಿಯಂತಹ ಹಾಗೂ ಧರ್ಮ ನಿಂದನೆ ಆರೋಪ ಹೊರಿಸಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲೆ ದೈಹಿಕ ಹಿಂಸೆ ನೀಡಿ ಜೀವಂತ ಸುಡುವ ಪ್ರಕರಣಗಳು ವಿಶ್ವದ ಅನೇಕ ಸುದ್ದಿ ಮಾಧ್ಯಮ ಮೂಲಕ ವರದಿಯಾಗುತ್ತಿವೆ. ದಿನದ ಪ್ರತಿ ಕ್ಷಣವನ್ನು ಹಿಂದೂ ಸಮಾಜದ ಅಲ್ಪಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದಾರೆ. ಆದ್ದರಿಂದ ಹಿಂದುಗಳ ಸುರಕ್ಷತೆಗೆ ಹಾಗೂ ಬದುಕಿನ ಭದ್ರತೆ ಒದಗಿಸುವಂತೆ ಬಾಂಗ್ಲಾ ದೇಶದ ಸರ್ಕಾರದ ಮೇಲೆ ಒತ್ತಡ ತರುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ಪಟ್ಟಣದ ಕಿತ್ತೂರು ಚೆನ್ನಮ್ಮ ಪುತ್ಥಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ತಹಸೀಲ್ದಾರರ ಕಚೇರಿಗೆ ಬಂದು ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ ಉಪ್ಪಿನಬೆಟಗೇರಿ, ಅವಿನಾಶ ಗೋಡಕಿಂಡಿ, ಪವನ್ ಮೇಟಿ, ದೇವು ಹಡಪದ, ಶೇಖರಗೌಡ ಪಾಟೀಲ, ಯಲ್ಲಪ್ಪ ಗಣಾಚಾರಿ, ಶಿದ್ದಲಿಂಗಪ್ಪ ದೇಸಾಯಿ, ಕೃಷ್ಣಾ ಗಾರವಾಡ, ಶೇಖರಗೌಡ ಪಾಟೀಲ, ಸುರೇಶ ಬಂಡಿವಡ್ಡರ, ಮರಿಯಪ್ಪ ರಾಮೇನಹಳ್ಳಿ, ನಾಗರಾಜ ಹೊಸಮನಿ, ಸೋಮು ಹಕ್ಕಂಡಿ, ಸುರೇಶ ಭಜಂತ್ರಿ, ಮಾರುತಿ ಭಜಂತ್ರಿ, ವೆಂಕಟೇಶ ಗುಗ್ಗರಿ, ಬಸವರಾಜ ಮುಂಡವಾಡ, ಕೃಷ್ಣಪ್ಪ ಗುಬ್ಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.