ಇ‍ವಿಎಂ ಬದಲು ಬ್ಯಾಲೆಟ್ ಪೇಪರ್ ತರುವಂತೆ ಪ್ರತಿಭಟನೆ

| Published : Sep 07 2025, 01:00 AM IST

ಇ‍ವಿಎಂ ಬದಲು ಬ್ಯಾಲೆಟ್ ಪೇಪರ್ ತರುವಂತೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಚುನಾವಣೆಗಳಲ್ಲಿ ಇ‍ವಿಎಂ ಬದಲು ಬ್ಯಾಲೆಟ್ ಪೇಪರ್ ತರಬೇಕೆಂದು ಹಾಗೂ ಕನ್ನಡ ಚಿತ್ರರಂಗ ಉಳಿವಿಗಾಗಿ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ರಾಮನಗರ: ಚುನಾವಣೆಗಳಲ್ಲಿ ಇ‍ವಿಎಂ ಬದಲು ಬ್ಯಾಲೆಟ್ ಪೇಪರ್ ತರಬೇಕೆಂದು ಹಾಗೂ ಕನ್ನಡ ಚಿತ್ರರಂಗ ಉಳಿವಿಗಾಗಿ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರದ ಬಗ್ಗೆ ಅನುಮಾನಗಳು ಮೂಡಿರುವುದರಿಂದ ಬ್ಯಾಲೆಟ್ ಪೇಪರ್ ವ್ಯವಸ್ಥೆ ಮಾಡಬೇಕು. ಪರಭಾಷಾ ಚಿತ್ರಗಳಿಂದ ಕನ್ನಡ ಚಿತ್ರರಂಗ ನೆಲಕಚ್ಚುತ್ತಿದೆ. ಇಲ್ಲಿ ಪರಭಾಷಾ ಚಿತ್ರಗಳ ಪ್ರದರ್ಶನ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಲು ರಾಜ್ಯ ಸರ್ಕಾರ ದಿಟ್ಟವಾದ ನಿಲುವು ತೆಗೆದುಕೊಂಡಿದೆ. ಸರ್ಕಾರದ ಈ ನಿರ್ಧಾರಕ್ಕೆ ನನ್ನ ಸಹಮತ ಇದೆ. ಇದರಿಂದ ಭ್ರಷ್ಟಾಚಾರ ನಿಲ್ಲುವುದರ ಜೊತೆಗೆ ಚುನಾವಣಾ ಆಯೋಗದ ಮೇಲಿನ ಅನುಮಾನವೂ ನಿವಾರಣೆಯಾಗುತ್ತದೆ ಎಂದರು.

ನಾನು ಸ್ಪರ್ಧೆ ಮಾಡಿದ ಚುನಾವಣೆಗಳಲ್ಲಿ ಬಂದಿರುವ ನೋಡಿದರೆ ಏನೋ ತಂತ್ರ ನಡೆದಿರುವ ಗುಮಾನಿ ಕಾಡುತ್ತಲೇ ಇದೆ. ನಾನು ಪ್ರತಿ ಮನೆ ಮನೆಗೂ ಚಿರಪರಿಚಿತನಾಗಿದ್ದೇನೆ. ಆದರೂ ನನಗೆ ಲಭಿಸಿರುವ ಮತಗಳು ಅನುಮಾನ ಮೂಡಿಸುತ್ತಿವೆ. ಇವಿಎಂ ಬಳಸಿ ಏನೋ ತಂತ್ರಗಾರಿಕೆ ಮಾಡಿರುವ ಶಂಕೆಯಿದೆ ಎಂದು ಹೇಳಿದರು.

ಚಿತ್ರಮಂದಿರಗಳ ಎದುರು ಪ್ರತಿಭಟನೆ:

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಕನ್ನಡ ಚಿತ್ರರಂಗ ಇಲ್ಲ. ಆ ರಾಜ್ಯಗಳಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದರೆ ಇಲ್ಲಿ ಪರಭಾಷಾ ಚಿತ್ರಗಳಿಗೆ ಅವಕಾಶ ನೀಡಬೇಕು. ಆದ್ದರಿಂದ ನವೆಂಬರ್ ತಿಂಗಳಿನಿಂದ ಪರಭಾಷ ಚಿತ್ರಗಳ ಪ್ರದರ್ಶನ ವಿರೋಧಿಸಿ ಚಿತ್ರ ಮಂದಿರಗಳ ಎದುರು ತೀವ್ರವಾಗಿ ಹೋರಾಟ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

1962ರ ಸೆಪ್ಟೆಂಬರ್ 7ರಂದು ಕೆಂಪೇಗೌಡ ರಸ್ತೆಯಲ್ಲಿ ಪರಭಾಷಾ ಚಿತ್ರಗಳ ಪ್ರದರ್ಶನ ವಿರೋಧಿಸಿ ಕನ್ನಡ ಚಳವಳಿ ವೇಳೆ ಅಲಂಕಾರ್ ಚಿತ್ರಮಂದಿರದ ಪರದೆಗೆ ಬೆಂಕಿ ಇಟ್ಟಿದ್ದೆ. ಆಗ ಪೊಲೀಸರು ನನ್ನನ್ನು ಬಂಧಿಸಿ ಬೂಟಿನ ಏಟು ಹೊಡೆದರು. ಇದನ್ನು ಲೆಕ್ಕಿಸದೆ ಕನ್ನಡಕ್ಕಾಗಿ ಹೋರಾಟ ಮುಂದುವರೆಸಿದ್ದೇನೆ.

ಇಂದು ಕನ್ನಡ ಚಿತ್ರರಂಗ ಉಳಿಯಬೇಕಿದೆ. ಮೈಸೂರಿನಲ್ಲಿದ್ದ ಪ್ರೀಮಿಯರ್ ಸ್ಟುಡಿಯೋ ಮುಚ್ಚಿ ಹೋಗಿದೆ. ಕಂಠೀರವ ಸ್ಟುಡಿಯೋ ಕೇಳುವವರು ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಕಂಠೀರವ ಸ್ಟುಡಿಯೋದಲ್ಲಿಯೇ ಕನ್ನಡ ಸಿನಿಮಾಗಳ ಚಿತ್ರೀಕರಣ ಆಗುವಂತೆ ಅಭಿವೃದ್ಧಿ ಪಡಿಸಬೇಕಿದೆ ಎಂದು ಒತ್ತಾಯಿಸಿದರು.

ಈ ಮೊದಲು ಇಡೀ ಕನ್ನಡ ಚಿತ್ರರಂಗ ಮದ್ರಾಸ್ ನಲ್ಲಿತ್ತು. ಅದನ್ನು ಕರ್ನಾಟಕಕ್ಕೆ ತರಲು ವೀರೇಂದ್ರ ಹೆಗ್ಗಡೆಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೋರಾಟ ಮಾಡಿ ಒಂದು ಚಲನಚಿತ್ರಕ್ಕೆ 50 ಸಾವಿರ ಸಬ್ಸಿಡಿ ಕೊಡಿಸಲಾಯಿತು. ಅದಾದ ಮೇಲೆ ದಿ.ದೇವರಾಜ ಅರಸುರವರು ಚಿತ್ರರಂಗಕ್ಕೆ ಶಕ್ತಿ ತುಂಬಿದರು. ಆದರೀಗ ಕನ್ನಡ ಚಿತ್ರರಂಗ ಮುಳುಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಾಣಿಜ್ಯ ಮಂಡಳಿಗೆ ಸಾ.ರಾ.ಗೋವಿಂದು ಸೇರಿದಂತೆ ಅನೇಕರು ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಮೊದಲು ಮಂಡಳಿಯಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಇತ್ತು. ಈಗ ಪರಭಾಷಿಕರು ಅಧ್ಯಕ್ಷರಾಗುತ್ತಿದ್ದಾರೆ. ಅವರಿಗೆ ಕನ್ನಡ ಅಂದರೆ ಗೊತ್ತಿಲ್ಲ. ಯಾವ ಭಾಷೆ ಸಿನಿಮಾ ಬೇಕಾದರು ತೆಗೆಯ ಬಹುದು ಎನ್ನುವ ಮನೋಭಾವನೆ ಬಂದು ಬಿಟ್ಟಿದೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.

ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ , ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ತಾಲೂಕು ಅಧ್ಯಕ್ಷ ವಿ.ಎನ್. ಗಂಗಾಧರ್, ತಾಲೂಕು ಮಹಿಳಾಧ್ಯಕ್ಷೆ ಭಾಗ್ಯ ಸುಧಾ, ದಲಿತ ಘಟಕ ಅಧ್ಯಕ್ಷ ಕೆ.ಜಯರಾಮು, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ಕಾರ್ಯದರ್ಶಿ ಎಸ್.ಶಿವಮೂರ್ತಿ, ನಗರ ಘಟಕ ಅಧ್ಯಕ್ಷ ಪ್ರಸನ್ನ, ತಾಲೂಕು ಉಪಾಧ್ಯಕ್ಷ ಕೆಂಪರಾಜು, ಆರ್ .ಜೆ.ಅರ್ಜುನ್ , ಬಿಡದಿ ಘಟಕ ಅಧ್ಯಕ್ಷ ಮಂಜುನಾಥ್ , ಉಪಾಧ್ಯಕ್ಷ ಕೃಷ್ಣಮೂರ್ತಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ಗಿರೀಶ್ ಗೌಡ, ವಾಟಾಳ್ ಪಕ್ಷದ ಅಧ್ಯಕ್ಷ ನಾರಾಯಣಸ್ವಾಮಿ, ಪಾರ್ಥಸಾರಥಿ, ಮಹದೇವ್ ಮತ್ತಿತರರು ಭಾಗವಹಿಸಿದ್ದರು.

6ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ದವಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.