ದಲಿತರಿಂದ ಮತ ಪಡೆದ ಸಮುದಾಯದ ಮಂತ್ರಿಗಳು, ಶಾಸಕರು ಯಾರೂ ಸಿಎಂ ಸ್ಥಾನ ಕೇಳುತ್ತಿಲ್ಲ. ಹಲ್ಲು ಕಿತ್ತ ಹಾವಾಗಿದ್ದಾರೆ. ಕಾಂಗ್ರೆಸ್ ಪಕ್ಷ ಗೂಂಡಾಗಿರಿ ಮಾಡುವ, ಧಮ್ಕಿ ಹಾಕುವವರಿಗೆ ಅವಕಾಶ ನೀಡುತ್ತಿದೆ. ದಲಿತರಿಗೆ ಸಿಎಂ ಸ್ಥಾನ ಕೊಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಟೈರ್ ಗೆ ಬೆಂಕಿ ಹಚ್ಚಿ ದಲಿತ ಸಂಘಟನೆಗಳ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.ನಗರದ ಬಂದೀಗೌಡ ಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಆಗಮಿಸಿದ ದಸಂಸ ಮುಖಂಡರು ಕಾಂಗ್ರೆಸ್ ಪಕ್ಷ, ಹೈಕಮಾಂಡ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದ ಕಳೆದ 79 ವರ್ಷಗಳಿಂದಲೂ ದಲಿತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ಹಾಕುತ್ತಾ ಬಂದಿದ್ದಾರೆ. ಆದರೆ, ಸಿಎಂ ಆಗುವ ಹಲವು ಅವಕಾಶಗಳು ಇದ್ದರೂ ದಲಿತರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡದೇ ಪಕ್ಷ ವಂಚಿಸುತ್ತಲೇ ಬಂದಿದೆ ಕಿಡಿಕಾರಿದರು.ರಾಜ್ಯವನ್ನು ಕಾಂಗ್ರೆಸ್ ಪಕ್ಷ ಹೆಚ್ಚಾಗಿ ಆಳಿದೆ. ಆದರೆ, ಹಿರಿಯ ನಾಯಕರಾದ ಬಸವಲಿಂಗಪ್ಪ, ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದಾರೆ. ಈಗ ಡಾ.ಜಿ.ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ವಂಚಿಸಲಾಗುತ್ತಿದೆ ಎಂದು ದೂರಿದರು.
ಪ್ರತಿ ಚುನಾವಣೆಗಳಲ್ಲಿ ದಲಿತ ಮತ ಪಡೆಯುವ ಕಾಂಗ್ರೆಸ್ ಪಕ್ಷ ಸಂಚು ರೂಪಿಸಿ ದಲಿತರಿಗೆ ಸಿಎಂ ಸ್ಥಾನದಿಂದ ದೂರ ಇಡುವ ಹುನ್ನಾರ ಮಾಡುತ್ತಾ ಬರುತ್ತಿದೆ. ದೇಶ ಮತ್ತು ರಾಜ್ಯಗಳಲ್ಲಿ ಹೆಚ್ಚು ಜನಸಂಖ್ಯೆಯಲ್ಲಿರುವ ದಲಿತರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ನೀಡುತ್ತಿದ್ದಾರೆ. ಈಗ ಸಿದ್ದರಾಮಯ್ಯ ಅವರಿಂದ ತೆರವಾಗಿರುವ ಸಿಎಂ ಸ್ಥಾನವನ್ನು ದಲಿತರಿಗೆ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕೇಂದ್ರ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿರುವ ಎಐಸಿಸಿ ಅಧ್ಯಕ್ಷ ಸ್ಥಾನವು ಯಾವುದೇ ಅಧಿಕಾರವಿಲ್ಲದ, ಪ್ರಯೋಜನಕ್ಕೆ ಬಾರದ ಹುದ್ದೆಯಾಗಿದೆ. ಕೂಡಲೇ ಎಸ್ಸಿ, ಎಸ್ಟಿ ಸಮುದಾಯಗಳಲ್ಲಿ ಯಾರೇ ಆದರೂ ಅವರಿಗೆ ಸಿಎಂ ಸ್ಥಾನ ಕೊಡದಿದ್ದರೆ ರಾಜ್ಯಾದ್ಯಂತ ದಲಿತರು ತಮ್ಮ ಶಕ್ತಿ ತೋರಿಸುತ್ತಾರೆ ಎಂದು ಎಚ್ಚರಿಸಿದರು.
ದಲಿತರಿಂದ ಮತ ಪಡೆದ ಸಮುದಾಯದ ಮಂತ್ರಿಗಳು, ಶಾಸಕರು ಯಾರೂ ಸಿಎಂ ಸ್ಥಾನ ಕೇಳುತ್ತಿಲ್ಲ. ಹಲ್ಲು ಕಿತ್ತ ಹಾವಾಗಿದ್ದಾರೆ. ಕಾಂಗ್ರೆಸ್ ಪಕ್ಷ ಗೂಂಡಾಗಿರಿ ಮಾಡುವ, ಧಮ್ಕಿ ಹಾಕುವವರಿಗೆ ಅವಕಾಶ ನೀಡುತ್ತಿದೆ. ದಲಿತರಿಗೆ ಸಿಎಂ ಸ್ಥಾನ ಕೊಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ಶೇ.70ರಷ್ಟು ದಲಿತರ ಮತಗಳನ್ನು ಪಡೆದು ದಲಿತರಿಗೆ ಅಧಿಕಾರ ನೀಡದೆ ಮೋಸ ಮಾಡುತ್ತಿದೆ. ರಾಹುಲ್ ಗಾಂಧಿ ಸಂವಿಧಾನ ಪರ ಎಂದು ಹೇಳುತ್ತಿರುತ್ತಾರೆ. ಆದರೆ, ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ. ಸಿಎಲ್ ಪಿ ಸಭೆಯಲ್ಲಿ ದಲಿತ ಸಿಎಂ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಾಠ ಕಲಿಸುವ ಜೊತೆಗೆ ಯಾವ ನಾಯಕರು ದಲಿತರ ಮತಗಳನ್ನು ಕೇಳದಂತೆ ಜನಾಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಾಂಗ್ರೆಸ್ ವಿರುದ್ಧವಿದ್ದರೂ ಕೂಡ ನಾವು ಆ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದೇವೆ. ಈಗಾಗಲೇ ಸರಣಿ ಹೋರಾಟಗಳು ನಡೆಸಲು ಸಭೆ ಮಾಡಿದ್ದೇವೆ. ಸಿಎಂ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ಪಕ್ಷ, ದಲಿತ ನಾಯಕರ ಮನೆಗಳ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಲಕ್ಷ್ಮಣ್ ಚೀರನಹಳ್ಳಿ, ನರಸಿಂಹಮೂರ್ತಿ, ಎಂ.ವಿ.ಕೃಷ್ಣ, ಅಂದಾನಿ ಸೋಮನಹಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.