ಸಾರಾಂಶ
ನಗರದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಗಳನ್ನು ದುರಸ್ತಿಪಡಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಪಿಡಬ್ಲ್ಯುಡಿ ಎಇಇ ಮರಿಸ್ವಾಮಿ ಅವರಿಗೆ ಮನವಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಹರಿಹರ
ನಗರದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಗಳನ್ನು ದುರಸ್ತಿಪಡಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಪಿಡಬ್ಲ್ಯುಡಿ ಎಇಇ ಮರಿಸ್ವಾಮಿ ಅವರಿಗೆ ಮನವಿ ನೀಡಲಾಯಿತು.ನಗರದಲ್ಲಿ ಹಳೆ ಪಿ.ಬಿ.ರಸ್ತೆ (ಬೀರೂರು-ಸಮ್ಮಸಗಿ ಹೆದಾರಿ) ಮತ್ತು ಹೊಸಪೇಟೆ-ಶಿವಮೊಗ್ಗ ಹೆದ್ದಾರಿಗಳು ಹಲವು ಕಿ.ಮೀ.ವರೆಗೆ ಹಾದು ಹೋಗಿವೆ. ಈ ಎರಡೂ ರಸ್ತೆಗಳು ಗುಂಡಿಮಯವಾಗಿದ್ದು, ನಗರದ ನಾಗರಿಕರು ಮತ್ತು ಹೊರ ಭಾಗದ ಜನತೆ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆಂದು ಸಂಘಟನೆಯ ತಾಲೂಕು ಅಧ್ಯಕ್ಷ ಎಸ್.ಗೋವಿಂದ ಹೇಳಿದರು.
ಒಂದು ರಸ್ತೆ ನಿರ್ಮಾಣವಾದಾಗ ೫ ವರ್ಷಗಳವರೆಗೆ ಗುಂಡಿಗಳಾದರೆ ನಿರ್ವಹಣೆ ಮಾಡಬೇಕೆಂಬ ನಿಯಮ ಹಾಗೂ ಅದಕ್ಕಾಗಿ ಅನುದಾನ ಮೀಸಲಿರುತ್ತದೆ. ಗುತ್ತಿಗೆದಾರರಿಂದ ಆ ನಿರ್ವಹಣೆ ಕೆಲಸ ಮಾಡಬೇಕಾದ ಪಿಡಬ್ಲ್ಯುಡಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿದ ಅವರು, ನಿರ್ವಹಣೆ ಮಾಡಲಾಗಿದೆ ಎಂದು ಬಿಲ್ ಪಾಸ್ ಮಾಡಿ ಅನುದಾನ ವೈಯಕ್ತಿಕವಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.ತಾಲೂಕಿನ ಪ್ರಮುಖ ಜನಪ್ರತಿನಿಧಿಗಳು, ಪಕ್ಷಗಳ ಮುಖಂಡರು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ರಾಜಕಾರಣ ಮಾಡುವುದನ್ನು ಬಿಟ್ಟು ಜನರಿಗೆ ಆಗುತ್ತಿರುವ ಸಂಕಷ್ಟವನ್ನು ಪರಿಹರಿಸುವತ್ತ ಗಮನ ಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಉಪಾಧ್ಯಕ್ಷ ಆನಂದ್ ಮಾತನಾಡಿ, ಒಂದು ವಾರದೊಳಗೆ ಗುಂಡಿಮಯವಾಗಿರುವ ಈ ರಸ್ತೆಗಳನ್ನು ದುರಸ್ತಿ ಪಡಿಸದಿದ್ದರೆ ಪಿಡಬ್ಲುಡಿ ಕಚೇರಿ ಎದುರು ಧರಣಿ ನಡೆಸುತ್ತೇವೆ. ಈ ರಸ್ತೆಗಳನ್ನು ಸಂಚಾರ ಯೋಗ್ಯ ಗೊಳಿಸದಿದ್ದರೆ ಪಿಡಬ್ಲುಡಿ ಕಚೇರಿ ಇಲ್ಲಿರುವ ಅಗತ್ಯವೆ ಇಲ್ಲ, ಗುಂಡಿಗಳಲ್ಲಿ ಎದ್ದು, ಬಿದ್ದು ಯಾರಾದರೂ ಗಾಯಗೊಂಡರೆ ಸಂತ್ರಸ್ತರು ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕೆಂದು ಆಗ್ರಹಿಸಿದರು.ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯ ಗುಂಡಿಯಲ್ಲಿ ಸಸಿ ನೆಟ್ಟು ಪ್ರತಿಭಟನಾಕಾರರು ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ಸಂಘಟನೆಯ ಪದಾಧಿಕಾರಿಗಳಾದ ಸುನಿಲ್ ಕುಮಾರ್ ಸಿ.ಎಚ್., ಮಧು ಎಂ., ಶ್ರೀನಿವಾಸ್ ಎಚ್.ಪಿ., ದಾದಾಪೀರ್, ಜಮೀಲಾಬಿ, ಸಾಗರ್, ಬಸವರಾಜ್, ವಿಜಯ್, ಅರುಣ್, ಪ್ರವೀಣ್, ಸಮಿಉಲ್ಲಾ, ದುರ್ಗಪ್ಪ ಇತರರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))