ಸಾರಾಂಶ
ಹಾವೇರಿ: ಕಳಪೆ ಬೀಜ, ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಬೇಕು. ಸತತ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಗುರುವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಅಖಿಲ ಕರ್ನಾಟಕ ರೈತ ಸಂಘ ಹಾಗೂ ಸಾಮೂಹಿಕ ನಾಯಕತ್ವದ ಸಂಘಗಳ ಒಕ್ಕೂಟದಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಅಖಿಲ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ದಿವಿಗೀಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಕಳಪೆ ಬೀಜ ಹಾಗೂ ಕಳಪೆ ರಸಗೊಬ್ಬರ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಕೇವಲ ಸೀಜನ್‌ನಲ್ಲಿ ಮಾತ್ರ ಅಧಿಕಾರಿಗಳು ತೋರಿಕೆಗೋಸ್ಕರ ಒಂದೆರಡು ಅಂಗಡಿಗಳಿಗೆ ದಾಳಿ ಮಾಡಿ ಪರಿಶೀಲಿಸುತ್ತಾರೆ. ಉಳಿದ ದಿನಗಳಲ್ಲಿ ಯಾವ ಅಂಗಡಿಗೂ ಭೇಟಿ ನೀಡುವುದಿಲ್ಲ. ಹಾಗಾಗಿ ಕಳಪೆ ಬಿತ್ತನೆ ಬೀಜ, ಗೊಬ್ಬರ ಎಗ್ಗಿಲ್ಲದೇ ಮಾರಾಟವಾಗುತ್ತಿದ್ದು, ಮಾರಾಟಕ್ಕೆ ಕಡಿವಾಣ ಹಾಕುವಂತೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಒತ್ತಾಯಿಸಿದರು.ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ರೈತರು ಬೆಳೆದ ಮೆಕ್ಕೆಜೋಳ, ಹತ್ತಿ, ಶೇಂಗಾ, ಸೋಯಾಬಿನ್ ಸೇರಿದಂತೆ ಅನೇಕ ಬೆಳೆಗಳು ಹಾನಿಗೊಳಗಾಗಿದ್ದು, ಎರಡೆರಡು ಬಾರಿ ಬಿತ್ತನೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿವೆ. ಸಮಯಕ್ಕೆ ಸರಿಯಾಗಿ ಯೂರಿಯಾ ರಸಗೊಬ್ಬರ ಸರಬರಾಜು ಆಗುತ್ತಿಲ್ಲ. ಹೀಗಾಗಿ ಬೆಳೆ ರಕ್ಷಣೆ ಮಾಡಿಕೊಳ್ಳಲಾಗದೇ ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಭಾರತೀಯ ಕೃಷಿ ಕಾರ್ಮಿಕ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ ಮಾತನಾಡಿ, ರೈತರಿಗೆ ಮಾರಕವಾಗಿದ್ದ ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಆದರೆ ರಾಜ್ಯ ಸರ್ಕಾರ ಇದುವರೆಗೂ ಹಿಂಪಡೆದಿಲ್ಲ. ಕೂಡಲೇ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು.ಕೃಷಿ ಪಂಪ್‌ಸೆಟ್‌ಗಳಿಗೆ ಒವರ್ ಲೋಡ್ ಆದ ಟಿಸಿಗಳನ್ನು ಹೆಚ್ಚುವರಿ ಟಿಸಿಗಳನ್ನಾಗಿ ಪರಿವರ್ತಿಸಬೇಕು. ಅಕ್ರಮ ಸಕ್ರಮದಲ್ಲಿ ಹಣ ತುಂಬಿದ ರೈತರಿಗೆ ಟಿಸಿ, ಕಂಬ, ವೈರ್ ನೀಡಬೇಕು. ಆರ್‌ಬಿಐ ನಿಯಮಾವಳಿ ಉಲ್ಲಂಘಿಸಿ ಸಾಲ ಮರುಪಾವತಿ ಮಾಡಲು ಒತ್ತಡ ಹಾಕುವ ಫೈನಾನ್ಸ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಹೇಶ ಕೊಟ್ಟೂರ, ಚಂದ್ರಶೇಖರ ಕುದರಿಹಾಳ, ಚಂದ್ರಪ್ಪ ಮಾನೇರ, ಫಕ್ಕೀರಪ್ಪ ಕೆರೂಡಿ, ಕಾವ್ಯಾ ಹುಡೇದ, ಲಲಿತಮ್ಮ ಹಿರೇಮಠ, ಪೂಜಾ ಮ್ಯಾಚೇರ, ಶಿವಪ್ಪ ಜಾವಣ್ಣವರ, ಲೋಕಪ್ಪ ಮುಚುಡಿ, ಗುರುರಾಜ ಹಿರೇಮಾಗಡಿ, ವಿನಾಯಕ ಕೊಟ್ಟೂರ, ಅಶೋಕ ಶಿಡಗನಾಳ, ಕೆ.ಬಿ. ಕಲ್ಲನಗೌಡ್ರ, ಶಿವಾನಂದಪ್ಪ ಜಾಡರ, ಮಲ್ಲನಗೌಡ ಸಾತೇನಹಳ್ಳಿ, ಹೊನ್ನಪ್ಪ ಶಿವಣ್ಣವರ, ಈರಪ್ಪ ಮಳವಳ್ಳಿ, ಬಿ.ಎಸ್. ಪುಟ್ಟಪ್ಪಗೌಡ್ರ, ವಿಜಯ ಮುದಿಗೌಡ್ರ, ನವೀನ ಬಣಕಾರ, ಕುಮಾರ ಗುಡದಳ್ಳಿ, ಮಾಲತೇಶ ಅಂಗಡಿ, ಫಕ್ಕೀರಪ್ಪ ಗಾಣಿಗೇರ, ಫಕ್ಕೀರಪ್ಪ ಕದರಮಂಡಲಗಿ ಸೇರಿದಂತೆ ಇತರರು ಇದ್ದರು.