ಸಾರಾಂಶ
ಅಕ್ರಮ ಕಟ್ಟಡ ನೆಲಸಮಕ್ಕೆ ಒತ್ತಾಯಿಸಿ ಪ್ರತಿಭಟನೆಸುರಪುರ ತಹಸೀಲ್ದಾರ್ ಮನವೊಲಿಕೆ ಧರಣಿ ವಾಪಸ್ ಪಡೆದ ದಸಂಸ
ಸುರಪುರ ತಹಸೀಲ್ದಾರ್ ಮನವೊಲಿಕೆ । ಧರಣಿ ವಾಪಸ್ ಪಡೆದ ದಸಂಸ
ಕನ್ನಡಪ್ರಭ ವಾರ್ತೆ ಸುರಪುರತಾಲೂಕಿನ ಕೆಂಭಾವಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪುರಸಭೆ ಅನುಮತಿಯಿಲ್ಲದೆ ಕಟ್ಟಡ ನಿರ್ಮಿಸುತ್ತಿರುವ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಬಣ) ಪದಾಧಿಕಾರಿಗಳು ಆಗ್ರಹಿಸಿ ನಡೆಸುತ್ತಿದ್ದ ಧರಣಿ 2ನೇ ದಿನದಂದು ತಹಸೀಲ್ದಾರ್ ಮನವೊಲಿಕೆ ಮೇರೆಗೆ ಹಿಂಪಡೆಯಲಾಯಿತು.
ಮಧ್ಯಾಹ್ನ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ವಿಜಯಕುಮಾರ, ಧರಣಿ ನಿರತರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು. ಸ್ಥಳದಲ್ಲಿ ಪುರಸಭೆ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿರುವವರಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಅದೇಶಿಸಿದರು. ತಹಸೀಲ್ದಾರ್ ಖಚಿತ ಭರವಸೆ ಮೇರೆಗೆ ಧರಣಿ ನಿರತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಧರಣಿ ಹಿಂಪಡೆದುಕೊಂಡರು.ಈ ವೇಳೆ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ, ಎಚ್.ಆರ್. ಬಡಿಗೇರ, ಸಹ ಸಂಚಾಲಕ ಧರ್ಮಣ್ಣ ಹೊಸಮನಿ, ಸಾಯಬಣ್ಣ ಎಂಟಮಾನ, ಸದಾಶಿವ ಬೊಮ್ಮನಹಳ್ಳಿ, ರಮೇಶ ಪೂಜಾರಿ, ಮಾನಪ್ಪ ಶೆಳ್ಳಗಿ, ಬಸ್ಸು ನಾಟೀಕಾರ, ಭೀಮಣ್ಣ, ಚಂದ್ರು ಕಕ್ಕೇರಾ, ಚಂದ್ರಕಾಂತ, ಶಿವಣ್ಣ ನಾಗರಾಳ, ಜಗದೀಶ ಯಕ್ತಾಪುರ, ಪರಮಣ್ಣ, ಸಿದ್ದು ಜೋಗಿ, ಸಂಗು ಪತ್ತೇಪುರ, ಕಾಸಿಮ್ ಯಡಿಯಾಪುರ, ಚಂದ್ರು, ಮಲ್ಲಪ್ಪ ಯಾಳಗಿ ಸೇರಿ ಹಲವರಿದ್ದರು.
ಕೆಂಭಾವಿ ಪಟ್ಟಣದ ಸರ್ವೇ ನಂ.348/3ರಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ಕಟ್ಟಡದ ಮಾಲೀಕರಿಗೆ 3 ಬಾರಿ ನೋಟೀಸ್ ಜಾರಿ ಮಾಡಲಾಗಿದೆ. ಇಂದು ಅಂತಿಮ ನೋಟೀಸ್ ಜಾರಿ ಮಾಡಲಾಗುತ್ತಿದೆ. 7 ದಿನಗಳಲ್ಲಿ ಕಟ್ಟಡ ತೆರವುಗೊಳಿಸದಿದ್ದಲ್ಲಿ, ಪುರಸಭೆ ವತಿಯಿಂದಲೆ ಕಟ್ಟಡವನ್ನು ತೆರವುಗೊಳಿಸಿ ಅದರ ಖರ್ಚನ್ನು ಮಾಲೀಕರಿಂದಲೇ ವಸೂಲಿ ಮಾಡಲಾಗುವುದು. ಪಟ್ಟಣದ ಬೇರೆ ಬೇರೆ ಕಡೆ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವ ಎಲ್ಲ ಕಟ್ಟಡದ ಮಾಲೀಕರಿಗೆ ಎಚ್ಚರಿಕೆ ನೋಟೀಸ್ ನೀಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮೊಹಮ್ಮದ್ ಯೂಸುಫ್ ತಿಳಿಸಿದ್ದಾರೆ.---
14ವೈಡಿಆರ್11