ಕಡಲೆ ಬಾಕಿ ಹಣಕ್ಕೆ ಒತ್ತಾಯಿಸಿ ಪ್ರತಿಭಟನೆ

| Published : Jan 03 2025, 12:31 AM IST

ಸಾರಾಂಶ

ಆರು ತಿಂಗಳ ಹಿಂದೆ ರೈತರ ಅರ್ಧದಷ್ಟು ಹಣ ನೀಡಿದ್ದು, ಇನ್ನೂ ಅರ್ಧ ಹಣ ನೀಡುವುದು ಬಾಕಿ ಉಳಿದಿದೆ. ಹಣ ನೀಡದೆ ರೈತರ ಜತೆ ಸಂಜೀವಿನಿ ಒಕ್ಕೂಟ ಚೆಲ್ಲಾಟವಾಡುತ್ತಿದೆ

ಮುಂಡರಗಿ: ತಾಲೂಕಿನಲ್ಲಿ ಸಂಜೀವಿನಿ ಒಕ್ಕೂಟದ ಮೂಲಕ ಖರೀದಿ ಮಾಡಿದ್ದ ಕಡಲೆ ಬಾಕಿ ಹಣ ತಕ್ಷಣವೇ ನೀಡಬೇಕೆಂದು ತಾಲೂಕಿನ ಹಳ್ಳಿಕೇರಿ ಗ್ರಾಮದ ರೈತರು ಗುರುವಾರ ತಾಪಂ ಎದುರು ಶಾಂತಿಯುತ ಪ್ರತಿಭಟನೆ ನಡೆಸಿದರು.

ಹಳ್ಳಿಕೇರಿ ಗ್ರಾಮದಲ್ಲಿ ಕಳೆದ ವರ್ಷ ಸಂಜಿವೀನಿ ಒಕ್ಕೂಟದ ಮೂಲಕ ಸುಮಾರು 62ಕ್ಕೂ ಹೆಚ್ಚು ರೈತರಿಂದ ಕಡಲೆ ಖರೀದಿಸಿದ್ದಾರೆ. ಆದರೆ ಖರೀದಿಸಿ ಒಂದು ವರ್ಷವಾದರೂ ಇದುವರೆಗೂ ಬಾಕಿ ಹಣ ಪಾವತಿಸಿಲ್ಲ. ಬಡ ರೈತರ ಸುಮಾರು ₹70 ಲಕ್ಷ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಕಾರಣ ಸಂಬಂಧಪಟ್ಟವರು ಸರಿಯಾದ ಕ್ರಮ ತೆಗೆದುಕೊಂಡು ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು.ಇಲ್ಲದಿದ್ದರೆ ಮುಂದಿನ ಹೋರಾಟ ಬೇರೆ ರೀತಿಯಲ್ಲಿ ಮಾಡಬೇಕಾಗುತ್ತದೆ ಎಂದು ರೈತ ಹೋರಾಟಗಾರರು ತಿಳಿಸಿದರು.

ಆರು ತಿಂಗಳ ಹಿಂದೆ ರೈತರ ಅರ್ಧದಷ್ಟು ಹಣ ನೀಡಿದ್ದು, ಇನ್ನೂ ಅರ್ಧ ಹಣ ನೀಡುವುದು ಬಾಕಿ ಉಳಿದಿದೆ. ಹಣ ನೀಡದೆ ರೈತರ ಜತೆ ಸಂಜೀವಿನಿ ಒಕ್ಕೂಟ ಚೆಲ್ಲಾಟವಾಡುತ್ತಿದೆ. ರೈತರು ತಮ್ಮ ಫಸಲನ್ನು ಕೊಟ್ಟಿರುವ ಹಣ ಕೊಡಲು ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದರಿಂದ ರೈತರಿಗೆಲ್ಲ ಬರಸಿಡಿಲು ಬಡಿದಂತಾಗಿದ್ದು, ಸಮಸ್ಯೆ ಸರಿಪಡಿಸಿ ಬಾಕಿ ಇರುವ ಹಣ ನೀಡಬೇಕು ಎಂದು ಮೌನ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಶರಣಪ್ಪ ಯತ್ನಟ್ಟಿ, ಗುರುಸಿದ್ದಯ್ಯ ಹೀರೆಮಠ, ಶರಣಪ್ಪಗೌಡ ಪಾಟೀಲ, ಬಸವರಾಜ ಬರಡ್ಡಿ, ಪ್ರಕಾಶ ಯತ್ನಟ್ಟಿ, ಬೀರಪ್ಪ ಕಲಕೇರಿ, ಸಜ್ಜನರ ಸೇರಿದಂತೆ ಅನೇಕ ಜನ ರೈತರು ಪಾಲ್ಗೊಂಡಿದ್ದರು.