ಸಾರಾಂಶ
ಬಳ್ಳಾರಿ: ಒಣಮೆಣಸಿನಕಾಯಿ ಬೆಳೆಗೆ ಬೆಂಬಲಬೆಲೆ ನೀಡಬೇಕು. ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಎಐಕೆಕೆಎಂಎಸ್ ರೈತ ಸಂಘಟನೆಯ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಒಣಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿದೆ. ಆದರೆ, ಬೆಳೆಗಾರರಿಗೆ ವೈಜ್ಞಾನಿಕವಾದ ಬೆಲೆ ಸಿಗದೇ ನಷ್ಟ ಅನುಭವಿಸುವಂತಾಗಿದೆ. ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆ ಕ್ರಮ ವಹಿಸದಿರುವುದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಪ್ರಮುಖರಾದ ಗೋವಿಂದ್, ಈ.ಹನುಮಂತಪ್ಪ ಮಾತನಾಡಿ, ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರು ಮತ್ತು ಕಂಪ್ಲಿ ಸೇರಿದಂತೆ ಜಿಲ್ಲೆಯ 5 ತಾಲೂಕುಗಳ ಪೈಕಿ 4 ತಾಲೂಕುಗಳ ಬಹುತೇಕ ರೈತರು ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಜಿಲ್ಲೆಯ ಮೆಣಸಿನಕಾಯಿ ಬೆಳೆಯು ಬ್ಯಾಡಗಿಯ ಮಾರುಕಟ್ಟೆಗೆ ಹೋಗಿ ಮಾರಾಟವಾಗುತ್ತಿದೆ. ಇದರಿಂದ ಪ್ರಯಾಣದ ವೆಚ್ಚವೂ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಒಂದು ಎಕರೆ ಮೆಣಸಿನಕಾಯಿ ಬೆಳೆ ಬೆಳೆಯಲು ₹1 ಲಕ್ಷ ಖರ್ಚಾಗುತ್ತಿದ್ದು, ಈಗಿನ ಬೆಲೆಗೆ ಮಾರಾಟಗೊಂಡರೆ ರೈತರು ನಷ್ಟಕ್ಕೀಡಾಗಬೇಕಾಗುತ್ತದೆ ಎಂದರು.ಕೂಡಲೇ ವೈಜ್ಞಾನಿಕ ಬೆಲೆ ನಿಗದಿಗೆ ಸರ್ಕಾರ ಮುಂದಾಗಬೇಕು. ದೂರದ ಊರುಗಳಿಗೆ ತೆರಳಿ ಬೆಳೆ ಮಾರಾಟವನ್ನು ತಪ್ಪಿಸಲು ಸ್ಥಳೀಯವಾಗಿಯೇ ಮಾರುಕಟ್ಟೆ ಸ್ಥಾಪಿಸಬೇಕು. 5531 ತಳಿಯ ಮೆಣಸಿನಕಾಯಿ ಬೆಳೆಗೆ ಕ್ವಿಂಟಲ್‌ಗೆ ₹25 ಸಾವಿರ ಹಾಗೂ ಬ್ಯಾಡಗಿಯ 2043 ತಳಿಗೆ ಕ್ವಿಂಟಲ್‌ಗೆ ₹50 ಸಾವಿರ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.
ಗಾಂಧಿಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಸಂಘಟನೆಯ ಸದಸ್ಯರು ಈಡಿಗ ಹಾಸ್ಟೆಲ್, ರಾಯಲ್ ವೃತ್ತ, ಮೀನಾಕ್ಷಿ ವೃತ್ತ, ನಗರ ಬಸ್ ನಿಲ್ದಾಣದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಸಂಘಟನೆಯ ಜಿಲ್ಲಾ ಪ್ರಮುಖರಾದ ಕೋಳೂರು ಬಸಣ್ಣ, ಸೋಮಸಮುದ್ರ ಹೊನ್ನೂರಪ್ಪ, ಲಿಂಗಪ್ಪ, ಧನರಾಜ್, ಗೋಪಾಲ್, ಕಾಸಿಂ ಸಾಬ್, ಮಲ್ಲಪ್ಪ, ರಾಮಕೃಷ್ಣ, ವೀರೇಶ್ ಗೌಡ, ತಿಮ್ಮಪ್ಪ, ಗೋವಿಂದ್, ಗಂಗಾಧರ, ಗಾದಿಲಿಂಗಪ್ಪ, ಮಂಜುನಾಥ ಗೌಡ, ರಾಮನ ಗೌಡ, ರಾಜಶೇಖರ್ ರೆಡ್ಡಿ, ಯಂಕಾರೆಡ್ಡಿ, ಶರಣಬಸವ, ನಾಗಪ್ಪ ಹಾಗೂ ರೈತ ಮುಖಂಡ ಕಲ್ಲುಕಂಬ ಪಂಪಾಪತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ, ಬೆಳೆಗೆ ಬೆಂಬಲ ಬೆಲೆ ನಿಗದಿಗೊಳಿಸಲು ಆಗ್ರಹಿಸಿ ಬಳ್ಳಾರಿ ಡಿಸಿ ಕಚೇರಿ ಎದುರು ಎಐಕೆಕೆಎಂಎಸ್ ರೈತ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.