ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಸಿಡಬ್ಲ್ಯುಎಸ್‌ಐ ಹಾವೇರಿ ಜಿಲ್ಲಾ ಘಟಕದ ಕಾರ್ಮಿಕರು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಮನವಿ ಸಲ್ಲಿಸಿದರು.

ಸವಣೂರು: ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಸಿಡಬ್ಲ್ಯುಎಸ್‌ಐ ಹಾವೇರಿ ಜಿಲ್ಲಾ ಘಟಕದ ಕಾರ್ಮಿಕರು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಮನವಿ ಸಲ್ಲಿಸಿದರು.

ಕಲ್ಯಾಣ ಮಂಡಳಿಗಳ ಸ್ವಾಯತ್ತತೆಯನ್ನು ಕಸಿಯುವ ಹಾಗೂ ನಿಧಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಲು ಅವಕಾಶ ನೀಡುವ ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು, ಪರ್ಯಾಯ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು. ಟೆಂಡರ್ ಆಧಾರಿತ ಯೋಜನೆಗಳನ್ನು ನಿಲ್ಲಿಸಿ, ನೇರ ಫಲಾನುಭವಿ ವರ್ಗಾವಣೆ (ಡಿಬಿಟಿ) ಯೋಜನೆಗಳನ್ನು ಜಾರಿಗೊಳಿಸಬೇಕೆಂದೂ ಕೋರಿದರು.

2021-22ರಿಂದ 2025-26ರ ಅವಧಿಯಲ್ಲಿ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕಾಗಿ ಸಲ್ಲಿಸಿದ 8,33,859 ಅರ್ಜಿಗಳು ತಿರಸ್ಕೃತವಾಗಿದ್ದು, ಆಧಾರ್ ಜೋಡಣೆ ಹಾಗೂ ಎಪಿಸಿಐ ಮ್ಯಾಪಿಂಗ್ ಹೆಸರಲ್ಲಿ 1,88,217 ಅರ್ಜಿಗಳಿಗೆ ಇನ್ನೂ ಹಣ ಪಾವತಿಯಾಗಿಲ್ಲ. 2021-22ರಲ್ಲಿ 717 ಕೋಟಿ ರು. ಪಾವತಿಯಾಗಿದ್ದರೆ, 2025-26ರಲ್ಲಿ ಕೇವಲ 148 ಕೋಟಿ ರು. ಪಾವತಿಯಾಗಿದೆ. ಬಾಕಿ ಸಹಾಯಧನ ಪಾವತಿಸಿ, ಮೊತ್ತವನ್ನು ಹೆಚ್ಚಿಸಬೇಕು; ಕುಟುಂಬ ಆ ನಲ್ಲಿ ರೈತ ಎಂದು ನಮೂದಿಸಿದ ಕಾರಣಕ್ಕೆ ತಿರಸ್ಕರಿಸಿದ ಅರ್ಜಿಗಳನ್ನು ಮಾನ್ಯ ಮಾಡಬೇಕು ಎಂದರು.

ಕಳಪೆ ಗುಣಮಟ್ಟದ ಕಿಟ್ ಖರೀದಿ ಹಾಗೂ ವೈದ್ಯಕೀಯ ತಪಾಸಣೆಯಲ್ಲಿ ನಡೆದಿದೆ ಎನ್ನಲಾದ 800 ಕೋಟಿ ರು. ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು, ಮನೆ ನಿರ್ಮಾಣ ಸಹಾಯಧನ ಯೋಜನೆ ಜಾರಿಗೊಳಿಸಬೇಕು ಹಾಗೂ ನೋಂದಣಿಯ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಚನ್ನವೀರಯ್ಯ ಹಿರೇಮಠ, ಉಪಾಧ್ಯಕ್ಷೆ ಮೀನಾಕ್ಷಿ ಸೊರಟೂರ, ಪ್ರಧಾನ ಕಾರ್ಯದರ್ಶಿ ರಿಯಾಜಅಹ್ಮದ ಮರಫಾಜಿ, ಖಜಾಂಚಿ ರಿಯಾಜಹ್ಮದ ಕೋಟೆನವರ, ಮಾಂತೆಶ ಹರಿಜನ, ಮಂಜುನಾಥ ಹರಿಜನ, ಅಮೀರ ಕರ್ಜಗಿ, ಇರ್ಷಾದ ಲಟೇವಾಲೆ, ಇಮಿತಿಯಾಜ ಮಕಾನಂದಾರ ಹಾಗೂ ಇತರರು ಇದ್ದರು.