ರೈತರ, ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

| Published : Jul 21 2024, 01:23 AM IST

ಸಾರಾಂಶ

ರೈತರ ಸಾಲಮನ್ನಾ, ಬೆಂಬಲ ಬೆಲೆ ಒದಗಿಸಬೇಕು. ರೈತರಿಗೆ 60 ವರ್ಷದ ಬಳಿಕ ಕನಿಷ್ಠ ಮಾಸಿಕ 10 ಸಾವಿರ ರು. ಪಿಂಚಣಿ ನೀಡಬೇಕು.

ಹೊಸಪೇಟೆ; ರೈತರ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕದ ಕರೆಯ ಮೇರೆಗೆ ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್‌) ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ರೈತರ ಸಾಲಮನ್ನಾ, ಬೆಂಬಲ ಬೆಲೆ ಒದಗಿಸಬೇಕು. ರೈತರಿಗೆ 60 ವರ್ಷದ ಬಳಿಕ ಕನಿಷ್ಠ ಮಾಸಿಕ 10 ಸಾವಿರ ರು. ಪಿಂಚಣಿ ನೀಡಬೇಕು. ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಹಾಗೂ ಸಂಪೂರ್ಣ ಉತ್ಪನ್ನದ ಸಂಗ್ರಹಣೆಯ ಖಾತರಿ ನೀಡಬೇಕು. ರೈತರ ಆತ್ಮಹತ್ಯೆ ಮತ್ತು ವಲಸೆ ತಡೆಯಲು ಸಾಲಮನ್ನಾ ಮಾಡಬೇಕು. ವಿದ್ಯುಚ್ಛಕ್ತಿ ವಲಯದ ಖಾಸಗೀಕರಣ ಮತ್ತು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ಪ್ರಸ್ತಾಪ ಕೈಬಿಡಬೇಕು. ಎಲ್ಲ ಕೃಷಿ ಮತ್ತು ಪಶುಸಂಗೋಪನಾ ವ್ಯವಸ್ಥೆಗಳಿಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೊರೇಟ್ ಪರವಾದ ಪಿಎಂಎಫ್‌ಬಿವೈ ಯೋಜನೆ ರದ್ದುಪಡಿಸಬೇಕು. 736 ರೈತ ಹುತಾತ್ಮರ ಸ್ಮರಣೆಗಾಗಿ ಸಿಂಘು, ಟೆಕ್ರಿ ಗಡಿಯಲ್ಲಿ ಹುತಾತ್ಮರ ಸ್ಮಾರಕ ನಿರ್ಮಿಸಬೇಕು. ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕು. ಭೂ ರಹಿತರಿಗೆ ಕೃಷಿ ಜಮೀನು ಒದಗಿಸಬೇಕು. ರೈತರ, ಕಾರ್ಮಿಕರ ಹಾಗೂ ಕೃಷಿ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಭೂಸ್ವಾಧೀನ ಕಾಯ್ದೆಯಡಿಯಲ್ಲಿ ಜಮೀನು ಕಳೆದುಕೊಂಡ ಪಾಪಿನಾಯಕನಹಳ್ಳಿ, ಗಾದಿಗನೂರು, ಕೊಟಗಿನಹಾಳು ಗ್ರಾಮಗಳ ಜನತೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಮೂಲಕ ಸಂಸದ ಈ. ತುಕಾರಾಂ ಅವರಿಗೆ ಮನವಿ ರವಾನಿಸಲಾಯಿತು.

ಮುಖಂಡರಾದ ಮರಡಿ ಜಂಬಯ್ಯ ನಾಯಕ, ಬಿಸಾಟಿ ತಾಯಪ್ಪ ನಾಯಕ, ನಾಗರಾಜ, ಎನ್‌. ಯಲ್ಲಾಲಿಂಗ, ಕೆ. ಸತ್ಯನಾರಾಯಣ, ಬಿ. ರಮೇಶ್‌ಕುಮಾರ, ನಾಗು ನಾಯ್ಕ ಮತ್ತಿತರರಿದ್ದರು.