ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳು ನ್ಯಾಯಾಲಯಗಳಲ್ಲಿ ಬಾಕಿ ಇರುವ ವಿಚಾರಣೆಗಳು ಹಾಗೂ ಆಡಳಿತಾತ್ಮಕ ಅಡೆತಡೆಗಳಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಗೊಂದಲಗಳು ನಿವಾರಣೆಯಾಗುವವರೆಗೆ ಹಳೆಯ ಮೀಸಲಾತಿ ಪದ್ಧತಿಯನ್ನೇ ತಾತ್ಕಾಲಿಕವಾಗಿ ಜಾರಿಗೆ ತರಬೇಕೆಂದು ಛಲವಾದಿ ಮಹಾಮಂಡಲದಿಂದ ಸರ್ಕಾರವನ್ನು ಆಗ್ರಹಿಸಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳು ನ್ಯಾಯಾಲಯಗಳಲ್ಲಿ ಬಾಕಿ ಇರುವ ವಿಚಾರಣೆಗಳು ಹಾಗೂ ಆಡಳಿತಾತ್ಮಕ ಅಡೆತಡೆಗಳಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಗೊಂದಲಗಳು ನಿವಾರಣೆಯಾಗುವವರೆಗೆ ಹಳೆಯ ಮೀಸಲಾತಿ ಪದ್ಧತಿಯನ್ನೇ ತಾತ್ಕಾಲಿಕವಾಗಿ ಜಾರಿಗೆ ತರಬೇಕೆಂದು ಛಲವಾದಿ ಮಹಾಮಂಡಲದಿಂದ ಸರ್ಕಾರವನ್ನು ಆಗ್ರಹಿಸಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಇದೇ ವೇಳೆ ಛಲವಾದಿ ಮಹಾಮಂಡಲದ ರಾಜ್ಯಾಧ್ಯಕ್ಷ ಡಿ. ಪುಟ್ಟರಾಜು ಮತ್ತು ಡಿ.ಎಸ್.ಎಸ್. ಮುಖಂಡ ಕೃಷ್ಣದಾಸ್ ಮಾಧ್ಯಮದೊಂದಿಗೆ ಮಾತನಾಡಿ, ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಶೇಕಡಾ ೧೭ರ ಮೀಸಲಾತಿಯನ್ನು ರದ್ದುಪಡಿಸಿರುವುದು ಹಾಗೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಹೊಸ ಅಧಿಸೂಚನೆ ಹೊರಡಿಸದಂತೆ ತಡೆಯಾಜ್ಞೆ ನೀಡಿರುವುದು ನೇಮಕಾತಿ ಪ್ರಕ್ರಿಯೆಯಲ್ಲಿ ಅನಿಶ್ಚಿತತೆ ಉಂಟುಮಾಡಿದೆ ಎಂದು ಮಹಾಮಂಡಲ ತಿಳಿಸಿದೆ. ೧೫+೩ರ ಮೀಸಲಾತಿ ಜಾರಿಗೆ ತೊಂದರೆಯಿಲ್ಲವೆಂದು ಮೌಖಿಕವಾಗಿ ತಿಳಿಸಿದರೂ, ಸ್ಪಷ್ಟ ಆದೇಶದ ಕೊರತೆಯಿಂದ ಅಭ್ಯರ್ಥಿಗಳು ಗೊಂದಲದಲ್ಲಿದ್ದಾರೆ ಎಂದರು. ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯನ್ನು ಎ, ಬಿ, ಸಿ ಪ್ರವರ್ಗಗಳಾಗಿ ವರ್ಗೀಕರಿಸಿ ಜಾತಿ ಪ್ರಮಾಣಪತ್ರ ವಿತರಿಸಲು ಹೊರಡಿಸಿರುವ ಆದೇಶದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಆರ್ಥಿಕ ಮತ್ತು ಆಡಳಿತಾತ್ಮಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಜಾತಿ ಪ್ರಮಾಣಪತ್ರದಲ್ಲಿ ಪ್ರವರ್ಗ ನಮೂದಿಸುವುದರಿಂದ ಭವಿಷ್ಯದಲ್ಲಿ ಪ್ರವರ್ಗ ಬದಲಾವಣೆ ಸಂಭವಿಸಿದರೆ ಮತ್ತೆ ಪ್ರಮಾಣಪತ್ರ ಪಡೆಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದರಿಂದ ಅನಗತ್ಯ ಖರ್ಚು ಮತ್ತು ಸಮಯ ನಷ್ಟವಾಗುತ್ತಿದೆ ಎಂದು ಮಹಾಮಂಡಲ ಆಕ್ಷೇಪಿಸಿದೆ ಎಂದು ಹೇಳಿದರು.
೦೩-೦೯-೨೦೨೫ರಂದು ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ೧೦೦ ರೋಸ್ಟರ್ ಬಿಂದುಗಳಲ್ಲಿ ಪರಿಶಿಷ್ಟ ಜಾತಿಗೆ ಶೇಕಡಾ ೧೭ರ ಮೀಸಲಾತಿ ನಿಗದಿ ಮಾಡಿದ್ದರೂ, ರೋಸ್ಟರ್ ಬಿಂದುಗಳನ್ನು ವೈಜ್ಞಾನಿಕವಾಗಿ ನಿಗದಿಪಡಿಸದೇ ೬ನೇ ಬಿಂದುವಿನ ಬದಲು ೯ನೇ, ೧೪ರ ಬದಲು ೧೫ನೇ, ೨೧ರ ಬದಲು ೨೩ನೇ ಬಿಂದುವಿಗೆ ಮುಂದೂಡಿರುವುದು ಕಾನೂನುಬಾಹಿರ ಕ್ರಮವಾಗಿದೆ ಎಂದು ಮಹಾಮಂಡಲ ಆರೋಪಿಸಿದೆ. ಆದ್ದರಿಂದ ರೋಸ್ಟರ್ ವ್ಯವಸ್ಥೆಯನ್ನು ಮರುಪರಿಶೀಲಿಸಿ ವೈಜ್ಞಾನಿಕ ಆಧಾರದ ಮೇಲೆ ಮರುನಿಗದಿ ಮಾಡಬೇಕು ಎಂದು ಒತ್ತಾಯಿಸಿದೆ.ವಿಶ್ವವಿದ್ಯಾಲಯಗಳು ಮತ್ತು ಇತರೆ ನೇಮಕಾತಿ ಪ್ರಾಧಿಕಾರಗಳಲ್ಲಿ ಪ್ರತಿ ವಿಭಾಗವನ್ನೂ ಪ್ರತ್ಯೇಕ ಘಟಕವನ್ನಾಗಿ ಪರಿಗಣಿಸಿ ಹುದ್ದೆಗಳನ್ನು ಪ್ರಕಟಿಸುವುದರಿಂದ ಎಲ್ಲಾ ಹುದ್ದೆಗಳು ಒಂದೇ ಪ್ರವರ್ಗಕ್ಕೆ ಸೀಮಿತವಾಗುತ್ತಿರುವುದು ಅನ್ಯಾಯವಾಗಿದೆ. ಆದ್ದರಿಂದ ೬+೬+೫ರ ಪ್ರಮಾಣದಲ್ಲಿ ನ್ಯಾಯಸಮ್ಮತ ಹಂಚಿಕೆ ಆಗುವಂತೆ ಎಲ್ಲಾ ಘಟಕಗಳನ್ನು ಒಂದಾಗಿ ಪರಿಗಣಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಮನವಿ ಮಾಡಲಾಗಿದೆ ಎಂದರು. ಇದಲ್ಲದೆ, ಸಣ್ಣ ಇಲಾಖೆಗಳಲ್ಲಿ ೧ ಅಥವಾ ೨ ಹುದ್ದೆಗಳಿದ್ದಾಗ ಮೀಸಲಾತಿ ನಿಗದಿಯನ್ನು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕೇಂದ್ರೀಕರಿಸಬೇಕು. ಪ್ರವರ್ಗ-ಎ ಅಭ್ಯರ್ಥಿಗಳಿಲ್ಲದಿದ್ದಲ್ಲಿ ಹುದ್ದೆಗಳನ್ನು ಪ್ರವರ್ಗ-ಬಿಗೆ, ಬಿ ಇಲ್ಲದಿದ್ದರೆ ಸಿಗೆ ವರ್ಗಾವಣೆ ಮಾಡುವಂತೆ ಆದೇಶಿಸಬೇಕು; ಯಾವುದೇ ಕಾರಣಕ್ಕೂ ಸಾಮಾನ್ಯ ವರ್ಗಕ್ಕೆ ವರ್ಗಾಯಿಸಬಾರದು ಎಂದು ಒತ್ತಾಯಿಸಿದರು. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ರೋಸ್ಟರ್ ಆದೇಶ ಹೊರಡಿಸದೇ ಇದ್ದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೇರಿದಂತೆ ಕೆಲವು ಸಂಸ್ಥೆಗಳು ಒಳಮೀಸಲಾತಿ ಜಾರಿಗೊಳಿಸಿರುವುದನ್ನು ತಕ್ಷಣ ರದ್ದುಪಡಿಸಿ, ಸರ್ಕಾರದಿಂದ ಸ್ಪಷ್ಟ ಆದೇಶ ಹೊರಡಿಸಬೇಕು. ಹಾಗೆಯೇ ಭಾರತದ ಸರ್ವೋಚ್ಛ ನ್ಯಾಯಾಲಯ ತೀರ್ಪಿನಂತೆ ಸಂವಿಧಾನದ ೧೫ ಮತ್ತು ೧೬ನೇ ವಿಧಿಗಳ ಅನ್ವಯ ಒಳಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಸೀಮಿತಗೊಳಿಸಿ, ಬಡ್ತಿ, ಅನುದಾನ ಹಂಚಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅನ್ವಯಿಸುವುದಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕೋರಿದರು. ಒಳಮೀಸಲಾತಿ ಕುರಿತು ಉಂಟಾದ ಕಾನೂನು ಹಾಗೂ ಆಡಳಿತಾತ್ಮಕ ಗೊಂದಲಗಳು ನಿವಾರಣೆಯಾಗುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಬೇಕು ಎಂದು ಛಲವಾದಿ ಮಹಾಮಂಡಲ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಎಂ.ವಿ. ಗೋವಿಂದರಾಜು, ಬಿ.ಸಿ. ಜಯದೇವಯ್ಯ, ಜವರಯ್ಯ, ಹರೀಶ್ ಉಳುವಾರೆ, ರಂಗಸ್ವಾಮಿ, ರಾಜು ಗೊರೂರು ಇತರರು ಉಪಸ್ಥಿತರಿದ್ದರು.