ರೈತ ಸಂಪರ್ಕ ರಸ್ತೆ ಸುಧಾರಣೆಗೆ ಆಗ್ರಹಿಸಿ ಪ್ರತಿಭಟನೆ

| Published : Sep 05 2024, 12:33 AM IST

ಸಾರಾಂಶ

ಗ್ರಾಪಂ ಆಡಳಿತ ಮಂಡಳಿಯ ಸದಸ್ಯರು ಹಾಗೂ ತಾಪಂ ಅನುದಾನದಲ್ಲಿ ನಮ್ಮೂರಿನಿಂದ ಹೆಸರೂರಿಗೆ ಹೋಗುವ ರಸ್ತೆ ಸುಧಾರಣೆಗೆ ಕ್ರಮಕೈಗೊಳ್ಳಬೇಕು

ಲಕ್ಷ್ಮೇಶ್ವರ: ದೊಡ್ಡೂರ ಗ್ರಾಮದಿಂದ ಹೆಸರೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ರೈತರಿಗೆ ಅವಶ್ಯವಾಗಿದ್ದು. ಶೀಘ್ರದಲ್ಲಿ ರಸ್ತೆ ಸುಧಾರಣೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ದೊಡ್ಡೂರ ಗ್ರಾಪಂ ಎದುರು ರೈತರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.

ಈ ವೇಳೆ ಗ್ರಾಮದ ಮುಖಂಡ ಅಮರಪ್ಪ ಗುಡಗುಂಟಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ದೊಡ್ಡೂರ ಗ್ರಾಮದಿಂದ ಹೆಸರೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದೊಡ್ಡೂರ ಗ್ರಾಮದ ನೂರಾರು ಎಕರೆ ಜಮೀನು ಇದ್ದು. ಈ ರಸ್ತೆಯು ಈಗ ಸಂಪೂರ್ಣ ಹದಗೆಟ್ಟು ಹೋಗಿದ್ದು. ರೈತರು ತಮ್ಮ ಹೊಲಗಳಿಗೆ ಹೋಗಲು ಹಾಗೂ ಹೊಲದಲ್ಲಿ ಬೆಳೆದಿರುವ ಫಸಲನ್ನು ಮನೆಗೆ ತರಲು ಪರದಾಡುವಂತಾಗಿದೆ. ಈ ಕುರಿತು ಹಲವು ಬಾರಿ ತಹಸೀಲ್ದಾರ್ ಹಾಗೂ ತಾಪಂ ಇಓಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಉಳ್ಳಟ್ಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿಯೂ ಮನವಿ ಸಲ್ಲಿಸಿದ್ದರೂ ಉಪಯೋಗವಾಗಿಲ್ಲ. ಆದ್ದರಿಂದ ಪ್ರತಿಭಟನೆಯ ಹಾದಿ ಹಿಡಿಯಬೇಕಾಗಿ ಬಂದಿತು ಎಂದು ಹೇಳಿದರು.

ಈ ವೇಳೆ ಗಣೇಶ ಲಮಾಣಿ ಮಾತನಾಡಿ, ಗ್ರಾಪಂ ಆಡಳಿತ ಮಂಡಳಿಯ ಸದಸ್ಯರು ಹಾಗೂ ತಾಪಂ ಅನುದಾನದಲ್ಲಿ ನಮ್ಮೂರಿನಿಂದ ಹೆಸರೂರಿಗೆ ಹೋಗುವ ರಸ್ತೆ ಸುಧಾರಣೆಗೆ ಕ್ರಮಕೈಗೊಳ್ಳಬೇಕು. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಬಾರ್ ಕೋಲು ಚಳವಳಿ ಮಾಡುವ ಮೂಲಕ ಹೆದ್ದಾರಿ ತಡೆ ನಡೆಸಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಪ್ರತಿಭಟನೆಕಾರರನ್ನು ಉದ್ದೇಶಿಸಿ ಗ್ರಾಪಂ ಅಧ್ಯಕ್ಷ ಮಲ್ಲಣ್ಣ ತೋಟದ ಮಾತನಾಡಿ, ಗ್ರಾಪಂ ವತಿಯಿಂದ ಹೆಸರೂರ ರಸ್ತೆ ಸುಧಾರಣೆಗೆ ಸುಮಾರು ₹10 ಲಕ್ಷಗಳ ಕ್ರೀಯಾ ಯೋಜನೆ ತಯಾರಿಸಿ ಕಳುಹಿಸಲಾಗಿದೆ. ಕ್ರೀಯಾ ಯೋಜನೆ ಮಂಜೂರಾಗಿ ಬಂದ್ ತಕ್ಷಣ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳುವ ಮೂಲಕ ರೈತರ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ನಾಗರಾಜ ರಗಟಿ, ಕರಿಯಪ್ಪ ಡೊಳ್ಳಿನ, ಚೆನ್ನಪ್ಪ ಬಾಗಲದ, ದುಂಡಪ್ಪ ಬಾಗಲದ, ಫಕ್ಕೀರೇಶ ಯಲಿಗಾರ, ಲಾಲಪ್ಪ ಲಮಾಣಿ, ನಾನಪ್ಪ ಲಮಾಣಿ, ಹುಲಿಗೆಪ್ಪ ಸವೂರ, ಪರಸಪ್ಪ ಚಿಂಚಲಿ, ಶಿವಪ್ಪ ಹುರುಕನವರ, ಸಂತೋಷ ಕೊಂಚಿಗೇರಿ, ಮಹಾಂತೇಶ ಗುಡ್ಡಣ್ಣವರ, ಗುರುರಾಜ ವಾರದ, ಬಸವರಾಜ ಬಾಗಲದ, ಹನಮಂತಪ್ಪ ಗುಡ್ಡಣ್ಣವರ, ಪರಶು ಲಮಾಣಿ, ಭೀಮನಗೌಡರ ಈಳಗೇರ ಸೇರಿದಂತೆ ಅನೇಕರು ಇದ್ದರು. ಪಿಡಿಓ ಶಿವಾನಂದ ಮಾಳವಾಡ, ತಾಪಂನ ತಳವಾರ, ಕಾರ್ಯದರ್ಶಿ ಗುರುವಿನ ಇದ್ದರು.