ಹಾವೇರಿ: ವಿಶೇಷಚೇತನರ ಮಾಸಾಶನ ನಿಲುಗಡೆ, ಅನಗತ್ಯ ಹಾಗೂ ಹಾಸ್ಯಾಸ್ಪದ ಆದಾಯ ಮಿತಿಯನ್ನು ವಿರೋಧಿಸಿ, ಮಾಸಾಶನ ಹೆಚ್ಚಳಕ್ಕಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ವಿಕಲಚೇತನರು ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಸಂಚಾಲಕ ಸಮಿತಿ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ವಾರ್ಷಿಕ ಆದಾಯ ಮಿತಿ 32 ಸಾವಿರ ರು.ಗಿಂತ ಹೆಚ್ಚಿರುವವರ ಮಾಸಾಶನವನ್ನು ಪರಿಶೀಲಿಸಬೇಕೆಂದು ಸರ್ಕಾರ ಆದೇಶ ಮಾಡಿದೆ. ಇದರಿಂದ ರಾಜ್ಯದ ಅಂಗವಿಕಲರು ಈ ಕುರಿತಂತೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ವಿಕಲಚೇತನರ ಪೆನ್ಷನ್ ನಿಲುಗಡೆಯಿಂದಾಗಿ ಔಷಧಿ, ಚಿಕಿತ್ಸೆ, ಪ್ರಯಾಣ ವೆಚ್ಚ ಹಾಗೂ ಇತರ ಅಗತ್ಯ ಖರ್ಚುಗಳಿಗೂ ಪರದಾಡುವಂತಾಗಿದೆ. ತಮ್ಮ ಕನಿಷ್ಠ ವೈಯಕ್ತಿಕ ಅಗತ್ಯಗಳಿಗೂ ಕುಟುಂಬದ ಸದಸ್ಯರು ಅಥವಾ ಇತರರನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಟುಂಬದ ವಾರ್ಷಿಕ ವರಮಾನ ಮಿತಿ 32 ಸಾವಿರ ಎನ್ನುವುದು, ತಿಂಗಳಿಗೆ 2,700 ರು.ಕ್ಕಿಂತ ಕಡಿಮೆಯಾಗಿದೆ. ಇಷ್ಟು ಕಡಿಮೆ ಹಣದಲ್ಲಿ ಒಬ್ಬ ವ್ಯಕ್ತಿ ಜೀವನ ನಡೆಸುವುದು ಅಸಾಧ್ಯ ಎನ್ನುವಾಗ ಇದನ್ನು ಕುಟುಂಬ ಆದಾಯ ಮಿತಿ ಎನ್ನುವುದು ಹಾಸ್ಯಾಸ್ಪದವಾಗಿದೆ. ಈಗಾಗಲೇ ರಾಜ್ಯದ ಬಡತನ ರೇಖೆಗಿಂತ ಕೆಳಗಿರುವವರ ಕುಟುಂಬವನ್ನು ಗುರುತಿಸಲು ಬಿಪಿಎಲ್ ರೇಷನ್ ಕಾರ್ಡಿಗೆ, 1.20 ಲಕ್ಷ ರು.ಗಳ ಆದಾಯ ಮಿತಿಯನ್ನು ಗುರುತಿಸಲಾಗಿದೆ.ವಿಶೇಷಚೇತನರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದ ಮತ್ತು ಸಂಕಷ್ಟಕ್ಕೆ ಒಳಗಾಗಿರುವ ಸಮುದಾಯದವರಾಗಿದ್ದಾರೆ. ಸರ್ಕಾರ ಮತ್ತು ಸಮಾಜದ ನೆರವಿಲ್ಲದೆ ವಿಶೇಷಚೇತನರು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಅಂಗವೈಕಲ್ಯದ ಕಾರಣದಿಂದಾಗಿ ಶಿಕ್ಷಣ, ಉದ್ಯೋಗ ಹಾಗೂ ಸ್ವಾವಲಂಬನೆಯ ಅವಕಾಶಗಳಿಂದ ವಂಚಿತರಾಗಿರುವ ಇವರು ಅತ್ಯಂತ ಹಿಂದುಳಿದಿರುವುದನ್ನು ಸರ್ಕಾರದ ವಿವಿಧ ಅಂಕಿ-ಅಂಶಗಳು ಸ್ಪಷ್ಟವಾಗಿ ತೋರಿಸುತ್ತವೆ ಎಂದು ದೂರಿದರು.
ಆದ್ದರಿಂದ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ಪಾಲಕರ ಒಕ್ಕೂಟ, ಕರ್ನಾಟಕ ರಾಜ್ಯ ಸಮಿತಿಯು ಈ ರೀತಿಯ ಅವೈಜ್ಞಾನಿಕ ವಾರ್ಷಿಕ ಮಾನದಂಡಗಳನ್ನು ಕೂಡಲೇ ರದ್ದು ಮಾಡಿ ಕನಿಷ್ಠ ಬಿಪಿಎಲ್ ರೇಷನ್ ಕಾರ್ಡ್‌ಗೆ ಅನ್ವಯಿಸುವ ವಾರ್ಷಿಕ ಆದಾಯ ಮಿತಿಯನ್ನು ಅಂಗವಿಕಲರ ಮಾಸಾಶನಕ್ಕೂ ಅನ್ವಯಿಸಬೇಕು ಹಾಗೂ ಅಂಗವಿಕರ ಮಾಶಾಸನವನ್ನು ಮಾಸಿಕ ಹತ್ತು ಸಾವಿರ ರೂಪಾಯಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ವಿಕಲಚೇತನರ ಹಾಗೂ ಪಾಲಕರ ಒಕ್ಕೂಟದ ಹಸೀನಾ ಹೆಡಿಯಾಲ, ಖಲಂದರ್ ಅಲ್ಲಿಗೌಡ್ರ, ಗಿರೀಜಾ ಗೌಳಿ, ಬಸಪ್ಪ ಮಲ್ಲಪ್ಪನವರ, ಪುಟ್ಟವ್ವ ಕಲ್ಲೇದೇವರ, ಅಕ್ಕಮ್ಮ ಲಮಾಣಿ, ಖುತೇಜಾ ನದಾಫ್, ಪಂಡಿತ ಫಕ್ಕೀರಪ್ಪ, ಪರ್ವತಗೌಡ ಕರೇಗೌಡ್ರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.