ಕನ್ನಡ ಫಲಕ ಅಳವಡಿಕೆ ಆಗ್ರಹಿಸಿ ಪ್ರತಿಭಟನೆ

| Published : Jan 03 2024, 01:45 AM IST

ಕನ್ನಡ ಫಲಕ ಅಳವಡಿಕೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಈಗಲಾದರೂ ಎಚ್ಚೆತ್ತು ನಾಮಫಲಕಗಳು ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು. ಕರವೇ ಕಾರ್ಯಕರ್ತರು ಸೇರಿದಂತೆ ಕನ್ನಡಪರ ಹೋರಾಟಗಾರರ ಮೇಲೆ ವಿನಾಕಾರಣ ಹಾಕಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು.

ಬಳ್ಳಾರಿ: ಇಂಗ್ಲಿಷ್ ನಾಮಫಲಕಗಳ ತೆರವಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸಿ ಹಾಗೂ ಬಳ್ಳಾರಿಯಲ್ಲಿ ಇಂಗ್ಲಿಷ್ ಫಲಕಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿದಂತೆ ಅನೇಕ ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. ಯಾವುದೇ ಫಲಕಗಳ ಮೇಲೆ ಶೇ. 60ರಷ್ಟು ಕನ್ನಡದ ನಾಮಫಲಕ ಇರಬೇಕು ಎಂಬುದು ಸರ್ಕಾರವೇ ಮಾಡಿರುವ ಕಾನೂನು. ಈ ಕಾನೂನು ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಹೋರಾಟಗಾರರನ್ನು ಬಂಧಿಸಿರುವುದು ಎಷ್ಟು ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಸರ್ಕಾರ ಈಗಲಾದರೂ ಎಚ್ಚೆತ್ತು ನಾಮಫಲಕಗಳು ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು. ಕರವೇ ಕಾರ್ಯಕರ್ತರು ಸೇರಿದಂತೆ ಕನ್ನಡಪರ ಹೋರಾಟಗಾರರ ಮೇಲೆ ವಿನಾಕಾರಣ ಹಾಕಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಹಾಗೂ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಕಾವಲು ಸಮಿತಿ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಕನ್ನಡದ ಪರವಾಗಿ ಒಂದು ಕೆಲಸ ಮಾಡದ ಇಂತಹ ನಿಗಮ ವಿಸರ್ಜಿಸಬೇಕು ಎಂದು ಆಗ್ರಹಿಸಿದರು.

ಕರವೇ ತಾಲೂಕು ಅಧ್ಯಕ್ಷ ಅಂಗಡಿ ಶಂಕರ್ ಡಿ. ಕಗ್ಗಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ, ನವ ಕರ್ನಾಟಕ ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ್, ಕರವೇ ಮುಖಂಡರಾದ ಶಬರಿ ರವಿಕುಮಾರ್, ರಾಜು, ಆನಂದಗೌಡ ತಗ್ಗಿನಬೂದಿಹಾಳ್, ದೇವೇಶ್ ಹಿರೇಮಠ್, ಗಿರಿಬಾಬು, ಬಸವನಗೌಡ, ಕುಡತಿನಿ ಬಾವಿ ಶಿವಕುಮಾರ್, ಮೋಕಾ ಪೊಂಪನಗೌಡ, ಬೆಳಗಲ್ಲು ಕೃಷ್ಣ, ಶಂಕರಬಂಡೆ ರಾಜೇಶ್, ಮಂಜುನಾಯ್ಕ, ದಿವಾಕರ್ ಮತ್ತಿತರರಿದ್ದರು.