ಸಾರಾಂಶ
ಕುಣಿಗಲ್ : ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆಗಾಗಿ ಆಗ್ರಹಿಸಿ ಡಿ.18ರಂದು ಬುಧವಾರ ರೈತರೊಂದಿಗೆ ಪಕ್ಷಾತೀತವಾಗಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಬಾಂಬೆ ಶಿವಣ್ಣ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಶ್ವತ ನೀರಾವರಿ ಯೋಜನೆ ಇಲ್ಲದೆ ವಂಚಿತವಾಗಿ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಕಿತ್ತನಾ ಮಂಗಲ, ಸಂತೆಮಾವತ್ತೂರು, ಟಿ.ಹೊಸಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸದೆ ನೀರನ್ನು ಮಾಗಡಿಗೆ ಕೊಂಡೊಯ್ಯುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕುಣಿಗಲ್ ತಾಲೂಕಿನ ಪಾಲಿನ 3.3 ಟಿಎಂಸಿ ನೀರನ್ನು ಇಲ್ಲಿನ ಎಲ್ಲಾ ಕೆರೆಗಳಿಗೆ ತುಂಬಿಸಲು ಯೋಚನೆ ಮಾಡದೆ ಮಾಗಡಿಗೆ ನೀರನ್ನು ಕೊಂಡೊಯುತ್ತಿರುವ ಹುನ್ನಾರ ಮಾಡಲಾಗುತ್ತಿದೆ.ನೀರು ಹರಿದರೆ ಅಂತರ್ಜಲ ವೃದ್ಧಿಯಾಗುತ್ತದೆ ಮೊದಲು ರೈತರಿಗೆ ನೀರು, ಊಟ ನೀಡಿ ನಂತರ ನಿಮ್ಮ ಗ್ಯಾರಂಟಿಗಳನ್ನು ನೀಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು . ಡಿ.18 ರಂದು ಬೆಳಿಗ್ಗೆ 11ಗಂಟೆಗೆ ಬುಧವಾರ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ರೈತರೊಂದಿಗೆ ಪಕ್ಷಾತೀತವಾಗಿ ನಡೆಯುವ ಹೋರಾಟದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.