ಸಾರಾಂಶ
ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರಿ ಭೂಮಿ ಗುರುತಿಸುವುದು ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿವೇಶನ ಹಾಗೂ ವಸತಿ ರಹಿತ ಹೋರಾಟ ಸಮಿತಿಯಿಂದ ಪಟ್ಟಣದ ಪುರಸಭೆ ಮುಂದೆ ಗುರುವಾರ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರಟಗಿ
ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರಿ ಭೂಮಿ ಗುರುತಿಸುವುದು ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿವೇಶನ ಹಾಗೂ ವಸತಿ ರಹಿತ ಹೋರಾಟ ಸಮಿತಿಯಿಂದ ಪಟ್ಟಣದ ಪುರಸಭೆ ಮುಂದೆ ಗುರುವಾರ ಪ್ರತಿಭಟನೆ ನಡೆಯಿತು.ಬೆಳಗ್ಗೆ ಪುರಸಭೆ ಮುಂದೆ ಹೋರಾಟ ಆರಂಭಿಸಿದ ನೂರಾರು ನಿವೇಶನ ಹಾಗೂ ವಸತಿ ರಹಿತ ಮಹಿಳೆಯರು ಮಧ್ಯಾಹ್ನದ ನಂತರ ತಹಸೀಲ್ದಾರ್, ತಾಪಂ ಹಾಗೂ ಪುರಸಭೆಯ ಸ್ಥಾನಿಕ ಕಚೇರಿಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಸಮಿತಿಯ ರಾಜ್ಯಾಧ್ಯಕ್ಷ ಚಂದ್ರಶೇಖರ ಡೋಂಗ್ರಿ ಹಾಗೂ ಜಿಲ್ಲಾ ಕಾರ್ಯದರ್ಶಿ ಎ.ಎಲ್. ತಿಮ್ಮಣ್ಣ ಮಾತನಾಡಿ, ಕಳೆದ ೭೫ ವರ್ಷಗಳಿಂದ ಆಡಳಿತ ನಡೆಸಿದ್ದ ಸರ್ಕಾರ ಬಡವರಿಗೆ ರೋಟಿ, ಮಕಾನ್, ಕಪಡಾ ಎನ್ನುವ ಸುಳ್ಳು ಭರವಸೆ ನೀಡುತ್ತಾ ಬರುತ್ತಿದೆ. ಹೊರತು, ಕೋಟ್ಯಾಂತರ ಬಡವರಿಗೆ ಇಂದಿಗೂ ಸೂರು ನೀಡಿಲ್ಲ. ಈ ದೇಶದಲ್ಲಿ ಇಂದು ಬಡವರು ಬೀದಿ ಬೀದಿಗಳಲ್ಲಿ ಬದುಕಬೇಕಾದ ದುಸ್ಥಿತಿ ಇದೆ.ರಾಜ್ಯದ ಪರಿಸ್ಥಿತಿ ಭಿನ್ನವಾಗಿಲ್ಲ. ಈ ಕುರಿತು ವಸತಿ ಸಚಿವರಿಗೂ ನಿವೇಶನ ಹಂಚುವಂತೆ ಮನವಿ ಸಲ್ಲಿಸಿದ್ದೇವೆ. ಅದೇ ರೀತಿ ಕಾರಟಗಿ ಪಟ್ಟಣದ ವ್ಯಾಪ್ತಿಯಲ್ಲಿ ಬಹುತೇಕ ಬಡವರು ಇನ್ನೂ ನಿವೇಶನ ಹಾಗೂ ವಸತಿ ರಹಿತವಾಗಿದ್ದಾರೆ.
ಇವರೆಲ್ಲರೂ ಸೇರಿ ಈಗ ವಸತಿ ಮತ್ತು ನಿವೇಶನ ರಹಿತರ ಘಟಕ ನಿರ್ಮಾಣ ಮಾಡಿಕೊಂಡಿದ್ದೇವೆ. ಇನ್ನೂ ಸಾವಿರಾರು ಸಂಖ್ಯೆಯ ಬಡವರು ಈವರೆಗೆ ನಿವೇಶನ ಹಾಗೂ ವಸತಿಗೆ ಅರ್ಜಿ ಸಲ್ಲಿಸಿಲ್ಲ. ಅನೇಕರು ಈಗಾಗಲೇ ಈ ಸಂಬಂಧ ಅರ್ಜಿ ಸಲ್ಲಿಕೆ ಮಾಡಿದ್ದು, ಅವುಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ನಿವೇಶನ ರಹಿತ ಮತ್ತು ವಸತಿ ರಹಿತ ಸಮೀಕ್ಷೆ ಪಟ್ಟಿಗೆ ಸೇರ್ಪಡೆ ಮಾಡಿರುವುದಿಲ್ಲ. ಕಳೆದ ೨೦ ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ ವಾಸ ಮಾಡುತ್ತಿದ್ದು, ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಲುವೆ ದಂಡೆಯ ಮೇಲೆ ಗುಡಿಸಲು ಹಾಕಿಕೊಂಡು ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಭೂಮಿ ಗುರುತಿಸಬೇಕು. ಭೂಮಿ ಲಭ್ಯವಿಲ್ಲದ ವೇಳೆ ಖಾಸಗಿ ಜಮೀನು ಖರೀದಿಸಿ ಜನರಿಗೆ ಹಂಚಿಕೆ ಮಾಡಬೇಕು. ನಿವೇಶನ ಮತ್ತು ವಸತಿಗಾಗಿ ಕಾರಟಗಿ ತಾಲೂಕು ಗ್ರಾಮಾಂತರ ರಚನೆ ಆಗಿರುವ ಜಾಗೃತ ಸಭೆಯನ್ನು ಶೀಘ್ರವಾಗಿ ಕರೆಯಬೇಕು. ಅಲ್ಲದೇ, ಈ ಸಭೆಗೆ ನಮ್ಮ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಹ್ವಾನಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಸಹ ಕಾರ್ಯದರ್ಶಿ ಕೆ.ಎಸ್. ಜನಾರ್ದನ, ರಾಜ್ಯ ಪ್ರ.ಕಾರ್ಯದರ್ಶಿ ಇ.ಎಸ್. ಮೋನಪ್ಪ, ಜಿಲ್ಲಾಧ್ಯಕ್ಷ ಹುಲಗಪ್ಪ, ತಾಲೂಕು ಅಧ್ಯಕ್ಷ ಬದ್ರಿ ನಾಗರಾಜ್, ಉಪಾಧ್ಯಕ್ಷ ಲಕ್ಷ್ಮಣ ನಾಯಕ, ಸದಸ್ಯರಾದ ಸುನೀತಾ, ನೀಲಮ್ಮ, ಮಲ್ಲಯ್ಯ ಯರಡೋಣಾ, ಶೇಖಮ್ಮ, ಕಾಮಾಕ್ಷಿ ಇತರರಿದ್ದರು.