ಹಣ ವಸೂಲಿಗಿಳಿದವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

| Published : Nov 16 2024, 12:32 AM IST

ಹಣ ವಸೂಲಿಗಿಳಿದವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

, ಕನಕಗಿರಿ ಹಾಗೂ ಕಾರಟಗಿ ತಾಲೂಕು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಕೆಲ ಪತ್ರಕರ್ತರು ಹಾಗೂ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ತೆರಳಿ ಅಂಗನವಾಡಿ ಕಾರ್ಯಕರ್ತೆಯರನ್ನು ಬೆದರಿಸುವ ಮೂಲಕ ಹಣ ವಸೂಲಿಗೆ ಇಳಿದಿದ್ದಾರೆ.

ಕನಕಗಿರಿ: ಕನಕಗಿರಿ-ಕಾರಟಗಿ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೆಲ ಪತ್ರಕರ್ತರು ಹಾಗೂ ಕನ್ನಡ ಸಂಘಟನೆಗಳ ಸೋಗಿನಲ್ಲಿ ಬಂದು ಹಣ ವಸೂಲಿಗಿಳಿಯುವವರ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಪಟ್ಟಣದ ಸಿಡಿಪಿಒ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿತು.

ಸಂಘಟನೆ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಮಾತನಾಡಿ, ಕನಕಗಿರಿ ಹಾಗೂ ಕಾರಟಗಿ ತಾಲೂಕು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಕೆಲ ಪತ್ರಕರ್ತರು ಹಾಗೂ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ತೆರಳಿ ಅಂಗನವಾಡಿ ಕಾರ್ಯಕರ್ತೆಯರನ್ನು ಬೆದರಿಸುವ ಮೂಲಕ ಹಣ ವಸೂಲಿಗೆ ಇಳಿದಿದ್ದಾರೆ. ಕನಕಗಿರಿ-ಕಾರಟಗಿ ವ್ಯಾಪ್ತಿಯ ೩೭೧ ಅಂಗನವಾಡಿ ಕೇಂದ್ರಗಳಲ್ಲಿ ೭೪೦ ಮಹಿಳೆಯರು ಅಂಗನವಾಡಿ ಕಾರ್ಯಕರ್ತರಾಗಿ ಮತ್ತು ಸಹಾಯಕಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಅಂಗನವಾಡಿ ಕೇಂದ್ರಗಳಿಗೆ ಕೆಲ ಪತ್ರಕರ್ತರು, ಕನ್ನಡ ಸಂಘದವರು ಎಂದು ಹೇಳಿಕೊಂಡು ಕೆಲಸದ ವೇಳೆ ಅಂಗನವಾಡಿಯಲ್ಲಿ ನಡೆಯುವ ಚಟುವಟಿಕೆಗಳನ್ನು ರೆಕಾರ್ಡ್ ಮಾಡುವುದು, ಇಲ್ಲಸಲ್ಲದ ಆರೋಪಗಳನ್ನು ಮಾಡಿ ಹೆದರಿಸುವುದು ನಡೆದಿದೆ. ಇದರಲ್ಲಿಯೇ ಕೆಲವರು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದರು.

ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರಿಗೆ ಈ ರೀತಿ ಕಿರುಕುಳ ನೀಡುವುದು ನಡೆದಿದೆ. ಅಂಗನವಾಡಿಗಳಿಗೆ ಬರುವ ಪೌಷ್ಟಿಕ ಆಹಾರದ ಬಗ್ಗೆ ಆರೋಪ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ನೇರವಾಗಿ ಅಂಗನವಾಡಿ ಕೇಂದ್ರಗಳಿಗೆ ನುಗ್ಗಿ ಹೆದರಿಸುವುದು, ವೀಡಿಯೋ ಮಾಡುವುದನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ಇಲಾಖೆ ಮತ್ತು ತಾಲೂಕು ಆಡಳಿತ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೇಂದು ಆಗ್ರಹಿಸಿದ್ದಾರೆ.

ಜಿಲ್ಲಾಧ್ಯಕ್ಷೆ ಕಲಾವತಿ, ಪ್ರಮುಖರಾದ ಲಲಿತಾ, ಅಮರಮ್ಮ, ಅನುಸೂಯಾ, ಲಕ್ಷ್ಮೀ ಸಜ್ಜನ್, ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ, ಗಿರಿಜಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇದ್ದರು.