ಹಿರಿಯ ಕಾಂಗ್ರೆಸ್ ನಾಯಕ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಘಟಕ ಹಾಗೂ ಬಸವರಾಜ ಶಿವಣ್ಣನವರ ಅಭಿಮಾನಿ ಬಳಗದಿಂದ ಗುರುವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ಹಿರಿಯ ಕಾಂಗ್ರೆಸ್ ನಾಯಕ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಘಟಕ ಹಾಗೂ ಬಸವರಾಜ ಶಿವಣ್ಣನವರ ಅಭಿಮಾನಿ ಬಳಗದಿಂದ ಗುರುವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ನಗರದ ಮುರುಘರಾಜೇಂದ್ರ ಮಠದ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಿ.ಬಿ. ರಸ್ತೆ ಸೇರಿ ವಿವಿಧಡೆ ಸಂಚರಿಸಿ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ಬಸವರಾಜ ಶಿವಣ್ಣನವರ ಪರ ಘೋಷಣೆ ಕೂಗಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಆನ್ವೇರಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಹಿರಿಯ ಶಾಸಕ, ನಾಲ್ಕು ಬಾರಿ ಬಸವರಾಜ ಶಿವಣ್ಣನವರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಚಿರಪರಿಚಿತರಾಗಿದ್ದು, ಎಲ್ಲ ಸಮುದಾಯಗಳ ವಿಶ್ವಾಸ ಗಳಿಸಿರುವ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ಕುರುಬ ಸಮಾಜ ಮಾತ್ರವಲ್ಲದೆ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಹಾವೇರಿ ಜಿಲ್ಲೆಗೂ ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ನಾಯಕರು ಮಂತ್ರಿ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.

ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಬ್ಯಾಡಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಬ್ಯಾಡಗಿ ಪುರಸಭೆ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಶಿಮಿ, ಮುಖಂಡ ವೀರೇಶ ಮತ್ತಿಹಳ್ಳಿ ಮಾತನಾಡಿ, ಉತ್ತರ ಕರ್ನಾಟಕದ ಹಿರಿಯ ನಾಯಕ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ಮಾತ್ರವಲ್ಲ, ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಸಂಪುಟದಲ್ಲಿ ಇನ್ನೂ ಒಂದು ಸ್ಥಾನ ಖಾಲಿಯಿದ್ದು, ಅದನ್ನು ಶಿವಣ್ಣನವರಿಗೆ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಅಶೋಕ ಬಣಕಾರ, ನಿಂಗರಾಜ ಶಿವಣ್ಣನವರ, ಈರಪ್ಪ ಲಮಾಣಿ, ಸಿದ್ದಣ್ಣ ಕುರಿ, ಅಶೋಕ ಹರನಗಿರಿ, ಬಸವರಾಜ ಕಂಬಳಿ, ವಿರೂಪಾಕ್ಷಪ್ಪ ಹುಲ್ಲೂರ, ರಮೇಶ ಚಾವಡಿ, ಬಸವರಾಜ ಹೆಡಿಗ್ಗೊಂಡ, ನಿಂಗಪ್ಪ ತುಕ್ಕಮ್ಮನವರ, ಬಾಬುಸಾಬ ಮೋಮಿನಗಾರ, ಮಹದೇವಪ್ಪ ಗಾಜಿಗೌಡ್ರ, ಮಂಜಣ್ಣ ಮಾಗಡಿ, ಪರಮೇಶ ತೋಟಗೇರ, ಸತೀಶ ಪಾಟೀಲ, ಖಾದರಸಾಬ ದೊಡ್ಡಮನಿ, ಬಿ.ಎಚ್.ಗುಡ್ಡನಗೌಡ್ರ, ರವಿ ಪೂಜಾರ, ಆಕಾಶ ರಡ್ಡಿ, ಅಣ್ಣಪ್ಪ ಕದರಮಂಡಲಗಿ, ಮರಿಯಪ್ಪ ಭಂಡಾರಿ, ನೀಲಪ್ಪ ಕಂಬಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮನವಿ ಸ್ವೀಕಾರ: ಪ್ರತಿಭಟನಾ ಸ್ಥಳಕ್ಕಾಗಮಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮನವಿ ಸ್ವೀಕರಿಸಿ, ಪ್ರತಿಭಟನಾಕಾರರ ಭಾವನೆಗಳನ್ನು ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು. ನಿಮ್ಮ ಬೇಡಿಕೆ ಶೀಘ್ರದಲ್ಲೇ ಈಡೇರುವ ವಿಶ್ವಾಸವಿದ್ದು, ಸರ್ಕಾರದ ಮಟ್ಟದಲ್ಲಿ ಅಗತ್ಯ ಒತ್ತಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪೆಟ್ರೋಲ್ ಕುಡಿಯಲು ಯತ್ನ: ಪ್ರತಿಭಟನೆ ವೇಳೆ ಮುಖಂಡರು ಮಾತನಾಡುತ್ತಿರುವಾಗ ಏಕಾಏಕಿ ಗುಡ್ಡಪ್ಪ ಓಲೇಕಾರ ಎಂಬ ಅಭಿಮಾನಿ ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದುಕೊಂಡು ಬಂದು ಪೆಟ್ರೋಲ್ ಕುಡಿಯಲು ಯತ್ನಿಸಿ, ಹೈಡ್ರಾಮಾ ಸೃಷ್ಟಿಸಿದರು. ಅಲ್ಲಿಯೇ ಇದ್ದ ಕೆಲ ಕಾರ್ಯಕರ್ತರು ಸಮಯ ಪ್ರಜ್ಞೆಯಿಂದ ಪೆಟ್ರೋಲ್ ಬಾಟಲಿ ಕಸಿದುಕೊಂಡು, ಸಮಾಧಾನಪಡಿಸಿದರು.