ಗದಗ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೂಕ್ತ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಗದಗ ನಗರದಲ್ಲಿ ಸಾವಿರಾರು ಕಾರ್ಯಕರ್ತರು ಬೃಹತ್ ಪ್ರತಿಭಟನಾ ಪಾದಯಾತ್ರೆ ಹಾಗೂ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ನಗರದ ದಿ. ಕಾಟನ್‌ ಸೇಲ್‌ ಸೊಸೈಟಿ ಆವರಣದಿಂದ ಈ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಭೂಮರಡ್ಡಿ ಸರ್ಕಲ್‌, ಮಹಾತ್ಮ ಗಾಂಧಿ ಸರ್ಕಲ್‌, ಮಹೇಂದ್ರಕರ್ ಸರ್ಕಲ್‌, ಟಾಂಗಾ ಕೂಟ, ಬಸವೇಶ್ವರ ಸರ್ಕಲ್, ಪಂಚರ ಹೊಂಡ ಹಾಗೂ ಜೋಡ ಮಾರುತಿ ದೇವಸ್ಥಾನ ಮಾರ್ಗವಾಗಿ ಮುಳಗುಂದ ನಾಕಾವನ್ನು ತಲುಪಿತು. ಮುಳಗುಂದ ನಾಕಾ ಬಳಿ ಸೇರಿದ ಸಾವಿರಾರು ಕಾರ್ಯಕರ್ತರನ್ನುದ್ದೇಶಿಸಿ ಪ್ರಮುಖ ನಾಯಕರು ಮಾತನಾಡಿದರು.

ಎತ್ತು ಚಕ್ಕಡಿ, ಟ್ರ್ಯಾಕ್ಟರ್‌

ಗದಗ- ಬೆಟಗೇರಿ ಅವಳಿ ನಗರದ 35 ವಾರ್ಡ್‌ಗಳು ಹಾಗೂ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಎತ್ತುಚಕ್ಕಡಿ, ಟ್ರ್ಯಾಕ್ಟರ್ ಹಾಗೂ ನೂರಾರು ವಾಹನಗಳ ಮೂಲಕ ಕಾರ್ಯಕರ್ತರು ಮೆರವಣಿಗೆಗೆ ಆಗಮಿಸಿದ್ದರು. ಎಚ್.ಕೆ. ಪಾಟೀಲರಿಗೆ ಯಾಕೆ ಸಚಿವ ಸ್ಥಾನ ನೀಡಬೇಕು? ಅವರಿಂದ ರಾಜ್ಯಕ್ಕೆ ಸಿಕ್ಕ ಕೊಡುಗೆಗಳೇನು ಎಂಬ ಮಾಹಿತಿ ಒಳಗೊಂಡ ಬ್ಯಾನರ್‌ಗಳನ್ನು ಹಿಡಿದು ಬಂದಿದ್ದು ಗಮನ ಸೆಳೆಯಿತು.

ಸಮಾವೇಶ


ಮೆರವಣಿಗೆ ಮುಳಗುಂದ ನಾಕಾಕ್ಕೆ ಆಗಮಿಸುತ್ತಿದ್ದಂತೆ ಸಮಾವೇಶವಾಗಿ ಮಾರ್ಪಟ್ಟಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಹಾವೇರಿ ಜಿಪಂ ಮಾಜಿ ಅಧ್ಯಕ್ಷ ಕೊಟ್ರಪ್ಪ ಬಸೇಗಣ್ಣಿ, ಮಹಿಳಾ ನಾಯಕಿ ಸುಜಾತಾ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ ಮುಂತಾದವರು ಮಾತನಾಡಿ, ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಅವರ ಅಭಿವೃದ್ಧಿ ಕಾರ್ಯಗಳ ಕುರಿತು ಸುಧೀರ್ಘವಾಗಿ ಮಾತನಾಡಿದರು.

ಈ ಬೃಹತ್ ಪ್ರತಿಭಟನೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ರವಿ ಮೂಲಿಮನಿ, ಮುಳಗುಂದ ಬ್ಲಾಕ್ ಕಮಿಟಿ ಅಧ್ಯಕ್ಷ ಬಸವರಾಜ ಸುಂಕಾಪೂರ, ಗದಗ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನೀಲಮ್ಮ ಬೋಳನವರ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿ, ನಗರಸಭೆ ಸದಸ್ಯ ಬರಕತಅಲಿ ಮುಲ್ಲಾ, ಬಸವರಾಜ ಕಡೆಮನಿ, ಶಾಂತಣ್ಣ ಮುಳವಾಡ, ಬಿ.ಆರ್. ದೇವರಡ್ಡಿ, ಮಹಮ್ಮದ್ ಶಾಲಗಾರ, ಮಾಂತೇಶ ಮಡಿವಾಳರ, ಪರಪ್ಪ ಕಮತರ, ಸರಫರಾಜ ಬಬರ್ಚಿ, ಮೋಹನ ದುರಗಣ್ಣವರ, ಚಂದ್ರಪ್ಪ ಕರಿಕಟ್ಟಿ, ಪೀರಸಾಬ ಕೌತಾಳ, ಸುಜಾತಾ ದೊಡ್ಡಮನಿ, ಜಿಪಂ ಮಾಜಿ ಅಧ್ಯಕ್ಷ ವಾಸಪ್ಪ ಕುರುಡಗಿ, ಸಿದ್ದಲಿಂಗೇಶ್ವರ ಪಾಟೀಲ, ಅಕ್ಬರ್ ಸಾಬ ಬಬರ್ಚಿ ಎಸ್.ಪಿ. ಬಳಿಗಾರ, ಸೇರಿದಂತೆ ನೂರಾರು ಪ್ರಮುಖ ನಾಯಕರು ಮತ್ತು ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಳಗುಂದ ನಾಕಾದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು.