ಗೋ ಸಂರಕ್ಷಣಾ ಕಾಯಿದೆ ತಿದ್ದುಪಡಿ ಮಾಡದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ ೨೦೨೦ರ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ ಆಶಯಕ್ಕೆ ಹಾಗೂ ರಾಜ್ಯದ ಮತ್ತು ಹಿಂದೂ ಸಮಾಜದ ಹಿತಾಸಕ್ತಿಗೆ ವಿರೋಧಿಯಾಗಿರುವುದರಿಂದ ಅದನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ವಿಶ್ವ ಹಿಂದು ಪರಿಷತ್, ಭಜರಂಗದಳ ಹಾಗೂ ವಿವಿಧ ಹಿಂದೂ ಸಂಘಟನೆ ಆಶ್ರಯದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಮುಂಡಗೋಡ ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಇಲ್ಲಿಯ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಇಲ್ಲಿಯ ಶಿವಾಜಿ ಸರ್ಕಲ್‌ನಲ್ಲಿ ಕೆಲಕಾಲ ರಸ್ತೆ ತಡೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ, ನಿರಂತರವಾಗಿ ಗೋವಧೆ ನಡೆಯುತ್ತಿದೆ. ಆಕಳು ಕರುಗಳು ಕಳ್ಳತನ ಪ್ರಕರಣಗಳು ಹೆಚ್ಚಿವೆ. ಈ ಬಗ್ಗೆ ದೂರು ನೀಡಿದರೂ ಕೂಡ ಪೊಲೀಸರು ಯಾವುದೇ ರೀತಿ ಕ್ರಮಕ್ಕೆ ಮುಂದಾಗುತ್ತಿಲ್ಲ. ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಶಾಸಕರು ಅಥವಾ ಮಂತ್ರಿಗಳ ಪ್ರಭಾವಕ್ಕೆ ಬೀರುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ಒಂದು ವಾರದೊಳಗೆ ಗೋಕಳ್ಳರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆಗೊಳಪಡಿಸಬೇಕು. ಪಟ್ಟಣಕ್ಕೆ ಹೊರಗಿನಿಂದ ಗೋಮಾಂಸ ಬರುತ್ತಿರುವುದನ್ನು ತಡೆಯಬೇಕಲ್ಲದೇ, ಇಲ್ಲಿಯ ಬನ್ನಿಕಟ್ಟೆ ಬಳಿ ತೆರೆದಿರುವ ಗೋ ಮಾಂಸ ಮಾರಾಟ ಮಳಿಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಿಂದೂ ಸಂಘಟನೆಯ ಪ್ರಮುಖರಾದ ತಂಗಮ ಚಿನ್ನನ್, ಶಂಕರ ಲಮಾಣಿ, ಸುರೇಶ ಕುಳ್ಳೊಳ್ಳಿ, ಪ್ರಕಾಶ ಬಡಿಗೇರ, ವಿಶ್ವನಾಥ ನಾಯರ, ವಿಭಾಗೀಯ ಸಂಯೋಜಕರಾದ ಅಮಿತ್ ಶೇಟ್, ಪಪಂ ಸದಸ್ಯ ಅಶೋಕ ಚಲವಾದಿ, ಮಂಜುನಾಥ ಹರ್ಮಲಕರ, ಬಸವರಾಜ ಟಣಕೆದಾರ, ಅಯ್ಯಪ್ಪ ಭಜಂತ್ರಿ, ಬಾಬಣ್ಣ ವಾಲ್ಮೀಕಿ, ತುಕಾರಾಮ ಇಂಗಳೆ, ನಾಗೇಶ ರೇವಣಕರ, ಸಂತೋಷ ತಳವಾರ, ವಿಶ್ವನಾಥ ನಾಯರ, ಗಿರೀಶ ಓಣಿಕೇರಿ, ಸಂತೋಷ ತಳವಾರ ಮುಂತಾದವರಿದ್ದರು.ರಸ್ತೆ ತಡೆಯಿಂದ ಪ್ರಯಾಣಿಕರ ಪರದಾಟ:

ಸುಮಾರು ೧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ್ದರಿಂದ ಶಿರಸಿ-ಹುಬ್ಬಳ್ಳಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಎರಡೂ ಬದಿ ಕಿಮೀನಷ್ಟು ಉದ್ದಕ್ಕೆ ಸರದಿ ಸಾಲಿನಲ್ಲಿ ವಾಹನಗಳು ನಿಂತುಕೊಂಡಿದ್ದರಿಂದ ದೂರ ದೂರದ ಊರಿಗೆ ತೆರಳಬೇಕಾದ ಪ್ರಯಾಣಿಕರು ಮುಂದೆ ಹೋಗಲಾಗದೆ ಕೆಲ ಕಾಲ ಇಲ್ಲಿಯೇ ಕಾಲ ಕಳೆಯಬೇಕಾಯಿತು.