ನುರಿತ ಸ್ತ್ರೀರೋಗ, ಪ್ರಸೂತಿ ತಜ್ಞರ ಖಾಯಂಗೊಳಿಸಲು ಆಗ್ರಹಿಸಿ ಪ್ರತಿಭಟನೆ

| Published : Nov 13 2025, 01:30 AM IST

ನುರಿತ ಸ್ತ್ರೀರೋಗ, ಪ್ರಸೂತಿ ತಜ್ಞರ ಖಾಯಂಗೊಳಿಸಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮುದಾಯ ಆರೋಗ್ಯ ಕೇಂದ್ರಕ್ಕೆ ನುರಿತ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ವೈದ್ಯರನ್ನು ಖಾಯಂಗೊಳಿಸುವಂತೆ ಆಗ್ರಹ

ಕಂಪ್ಲಿ: ಸಮುದಾಯ ಆರೋಗ್ಯ ಕೇಂದ್ರಕ್ಕೆ ನುರಿತ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ವೈದ್ಯರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಕಂಪ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಇಲ್ಲಿನ ಪುರಸಭೆ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕೆಎಂಆರ್‌ಆರ್‌ವಿ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ, ಆಸ್ಪತ್ರೆಗೆ ಬರುವ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಮತ್ತು ದೈಹಿಕ ಹಾಗೂ ಯೋಗ ಕ್ಷೇಮವನ್ನು ಸುಧಾರಿಸಬೇಕಾದ ಆರೊಗ್ಯ ಸೇವೆಗಳು ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಭ್ಯವಿಲ್ಲ. ಗರ್ಭಿಣಿ ಮಹಿಳೆಯರ ಪ್ರಸವಪೂರ್ವ ಮತ್ತು ಪ್ರಸವದ ನಂತರದ ಆರೈಕೆಗೆ ನೀಡುವ ತುರ್ತು ವೈದ್ಯಕೀಯ ಸೇವೆಗಳು ಸಕಾಲದಲ್ಲಿ ಲಭ್ಯವಾಗದ ಕಾರಣದಿಂದಾಗಿ ತಾಯಿ ಮತ್ತು ಹಸುಗೂಸುಗಳ ಸಾವು ನೋವು ಅನುಭವಿಸುತ್ತಿವೆ.ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ನುರಿತ ತಜ್ಞ ವೈದ್ಯರನ್ನು ಖಾಯಮ್ಮಾಗುವಂತೆ ನಿಯೋಜನೆ ಮಾಡಬೇಕು ಹಾಗೂ ಅಗತ್ಯ ಸೌಲಭ್ಯಗಳನ್ನು ಕೇಂದ್ರ ಸ್ಥಾನದಲ್ಲೇ ಒದಗಿಸಬೇಕು. ಗರ್ಭಿಣಿಯರು ಹೆರಿಗೆಗೆ ಬಂದಾಗ ಸಮರ್ಪಕ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರ ಕೊಳೆಯುತ್ತಿದ್ದು ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ನುರಿತ ತಂತ್ರಜ್ಞರನ್ನು ನೇಮಿಸಬೇಕು. ಹಲವು ವರ್ಷಗಳಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಟಿಕ್ಕಾಣಿ ಹೂಡಿರುವ ಕೆಲ ಸಿಬ್ಬಂದಿಗಳನ್ನ ಬೇರೆಡೆ ವರ್ಗಾಯಿಸಬೇಕು. ಕೂಡಲೇ 100 ಹಾಸಿಗೆ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಿ ತಾಲೂಕಿನ ಜನತೆಗೆ ಅನುಕೂಲತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಡಿಎಚ್‌ಒ ಖುದ್ದಾಗಿ ಬಂದು ಮನವಿ ಸ್ವೀಕರಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿಡಿದ್ದರು.

ಈ ವೇಳೆ ಸ್ಥಳಕ್ಕೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ ಆಗಮಿಸಿ ಧರಣಿನಿರತರನ್ನು ಸಮಾಧಾನಿಸಿ, ಅನಿವಾರ್ಯ ಕಾರಣಗಳಿಂದ ಡಿಎಚ್‌ಒ ಇಲ್ಲಿಗೆ ಬಂದಿಲ್ಲ. ತೋರಣಗಲ್ಲಿನಿಂದ ಡಾ.ರಜಿಯಾಬೇಗಂ, ರೂಪನಗುಡಿಯಿಂದ ಡಾ.ಚಿತ್ರಾ ವರ್ಣೇಕರ್ ಸ್ತ್ರೀರೋಗ ತಜ್ಞ ತಲಾ ಮೂರು ದಿನ ಬಂದು ತಪಾಸಿಸುತ್ತಿದ್ದಾರೆ. ಖಾಯಂ ಸ್ತ್ರೀ ರೋಗ ತಜ್ಞರ ನೇಮಕಕ್ಕೆ ಅರ್ಜಿ ಕರೆದಿದ್ದರೂ ಯಾರೂ ಅರ್ಜಿ ಸಲ್ಲಿಸಿಲ್ಲ. ತಾತ್ಕಾಲಿಕ ವ್ಯವಸ್ಥೆ ಮಾಡಿದ್ದು ಸಹಕರಿಸುವಂತೆ ಕೋರಿದರು.

ಈ ಕುರಿತು ಧರಣಿ ನಿರತರು ಪ್ರತಿಕ್ರಿಯಿಸಿ, ಕೂಡಲೇ ಖಾಯಂ ತಜ್ಞರ ಅವಶ್ಯಕವಿರುವುದಾಗಿ ಆರೋಗ್ಯ ಸಚಿವರ ಗಮನಕ್ಕೆ ತನ್ನಿ. ನಮ್ಮ ಶಾಸಕರೊಂದಿಗೆ ನಿಯೋಗ ಹೋಗಿ ಖಾಯಂ ವೈದ್ಯರನ್ನು ನೇಮಿಸಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಾನಾ ಸಂಘಟನೆಗಳ ಪದಾಧಿಕಾರಿಗಳಾದ ಲಕ್ಷ್ಮಣ, ರವಿ ಮಣ್ಣೂರು, ಸಣಾಪುರ ಮರಿಸ್ವಾಮಿ, ಸಣ್ಣೆಪ್ಪ ತಳವಾರ್, ಸಿ.ಬಸವರಾಜ್, ಎಚ್.ಬಸಪ್ಪ, ಸಿ.ಹುಸೇನಪ್ಪ, ಕೆ.ಮೆಹಬೂಬ್, ಎಚ್.ಶ್ರೀನಿವಾಸ, ಕೆ.ದುರುಗೇಶ ಬರಗೂರು, ಪುರುಷೋತ್ತಮ ಸುಗ್ಗೇನಹಳ್ಳಿ, ಎನ್.ರಾಜಾಭಕ್ಷಿ, ಶೋಭಾರಾಂಪುರ, ಶಿವಗಂಗಮ್ಮ, ಗಂಗಾವತಿಯ ಯನಮೂರ, ಅಜಯ್, ತಾಲೂಕು ಮೇಲ್ವಿಚಾರಣ ಅಧಿಕಾರಿ ಡಾ.ಜಿ.ಅರುಣ್, ಡಾ.ವೀರೇಶ್, ಡಾ.ಸಾಗರ್ ಭರಮಕ್ಕನವರ್, ಡಾ.ಎನ್.ಸುರೇಶಕುಮಾರ್, ಆರೋಗ್ಯ ಸಿಬ್ಬಂದಿ ಪಿ.ಬಸವರಾಜ, ವಿರುಪಾಕ್ಷಿ, ತೃತಿಯ ಲಿಂಗಿ ರಾಜಮ್ಮ ಸೇರಿ ಇತರರಿದ್ದರು.