ಹದಿನೈದು ದಿನಗಳ ಹಿಂದೆ ನಡೆದ ಸ್ಟೇಷನ್ ಮಾಸ್ಟರ್ ನೇಮಕಾತಿ ಪರೀಕ್ಷೆಯಲ್ಲೂ ಕನ್ನಡವನ್ನು ಕೈಬಿಡಲಾಗಿದೆ. ಇದು ವ್ಯವಸ್ಥಿತವಾಗಿ ರೈಲ್ವೆ ಉದ್ಯೋಗಗಳಿಂದ ಕನ್ನಡಿಗರನ್ನು ಕೈಬಿಡುವ ದುಷ್ಟ ಆಲೋಚನೆಯಾಗಿದೆ. ಒಕ್ಕೂಟ ಸರ್ಕಾರ ನಡೆಸುವ ಯಾವುದೇ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವುದು ನಿಜವಾದ ಒಕ್ಕೂಟ ವ್ಯವಸ್ಥೆಯ ರೂಪವಾಗಿದೆ.

ಕನ್ನಡಪ್ರಭವಾರ್ತೆ ಮಂಡ್ಯ

ರೈಲ್ವೆ ಇಲಾಖೆಯ ನೌಕರರ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸದ ರೈಲ್ವೆ ಇಲಾಖೆ ನಿರ್ಧಾರವನ್ನು ಖಂಡಿಸಿ ಶುಕ್ರವಾರ ವಿವಿಧ ಕನ್ನಡಪರ ಸಂಘಟನೆಗಳು ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ನಗರ ರೈಲು ನಿಲ್ದಾಣದ ಎದುರು ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ, ರೈಲ್ವೆ ಇಲಾಖೆಯಲ್ಲಿ ಮೊದಲಿನಿಂದಲೂ ಕನ್ನಡಿಗರನ್ನು ವಂಚಿಸುತ್ತಾ ಬರಲಾಗಿದೆ. ರೈಲ್ವೆ ನೇಮಕಾತಿಗಳ ಬಡ್ತಿ ಬಗೆಗಿನ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸುವ ಮೂಲಕ ಉನ್ನತ ಹುದ್ದೆಗಳನ್ನು ಕನ್ನಡಿಗರಿಗೆ ತಪ್ಪಿಸುವ ಹುನ್ನಾರ ನಡೆದಿದೆ. ಮೊದಲಿನಿಂದಲೂ ರೈಲ್ವೆಯಲ್ಲಿ ಕನ್ನಡಿಗರ ಪ್ರಾತಿನಿಧ್ಯ ಕಡಿಮೆ ಇದೆ. ರಾಜ್ಯದ ರೈಲ್ವೆ ಮಂತ್ರಿಯೊಬ್ಬರು ಇದ್ದಾಗಲೂ ಇದೊಂದು ಕಣ್ತಪ್ಪಿನಿಂದ ಆಗಿರುವ ಪ್ರಮಾದ ಎಂದು ಅಧಿಕಾರಿಗಳು ಭಂಡ ಸಮರ್ಥನೆಗೆ ಇಳಿದಿದ್ದಾರೆ ಎಂದು ಟೀಕಿಸಿದರು.

ಹದಿನೈದು ದಿನಗಳ ಹಿಂದೆ ನಡೆದ ಸ್ಟೇಷನ್ ಮಾಸ್ಟರ್ ನೇಮಕಾತಿ ಪರೀಕ್ಷೆಯಲ್ಲೂ ಕನ್ನಡವನ್ನು ಕೈಬಿಡಲಾಗಿದೆ. ಇದು ವ್ಯವಸ್ಥಿತವಾಗಿ ರೈಲ್ವೆ ಉದ್ಯೋಗಗಳಿಂದ ಕನ್ನಡಿಗರನ್ನು ಕೈಬಿಡುವ ದುಷ್ಟ ಆಲೋಚನೆಯಾಗಿದೆ. ಒಕ್ಕೂಟ ಸರ್ಕಾರ ನಡೆಸುವ ಯಾವುದೇ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವುದು ನಿಜವಾದ ಒಕ್ಕೂಟ ವ್ಯವಸ್ಥೆಯ ರೂಪವಾಗಿದೆ. ಸ್ಟೇಷನ್ ಮಾಸ್ಟರ್ ಹುದ್ದೆಗಳನ್ನು ಕನ್ನಡದಲ್ಲಿ ಬರೆಯುವಂತೆ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಮಾತನಾಡಿ, ಕಳೆದ ಮೂರು ದಶಕಗಳಿಂದ ತುಮಕೂರು ಚಾಮರಾಜನಗರ ಹಾಗೂ ಹೆಜ್ಜಾಲ- ಕನಕಪುರ- ಚಾಮರಾಜನಗರ ಉದ್ದೇಶಿತ ರೈಲು ಯೋಜನೆಗಳು ಕಡತದಲ್ಲೆ ಧೂಳು ಹಿಡಿಯುತ್ತಿವೆ. ಮೈಸೂರು ಸಂಸ್ಥಾನದಲ್ಲಿ ನಮ್ಮದೆ ಮೈಸೂರು ರೈಲು ವ್ಯವಸ್ಥೆ ಉತ್ತಮವಾಗಿತ್ತು. ಆದರೆ, ವಾರ್ಷಿಕ ನಾಲ್ಕು ಲಕ್ಷ ಕೋಟಿ ರು. ತೆರಿಗೆ ಸಲ್ಲಿಸುವ ಕರ್ನಾಟಕ ರಾಜ್ಯ ಅಗತ್ಯ ರೈಲ್ವೆ ಯೋಜನೆಗಳಿಲ್ಲದೆ ನರಳುತ್ತಿದೆ. ಕೂಡಲೆ ಕೇಂದ್ರ ಸರ್ಕಾರ ಈ ಎರಡು ಯೋಜನೆ ಜಾರಿಗೊಳಿಸಲು ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು. ಈ ಭಾಗದ ಸಂಸದರು ಈ ಕುರಿತು ದನಿ ಎತ್ತಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ರೈಲ್ವೆ ವಾಣಿಜ್ಯ ವಿಭಾಗದ ಮುಖ್ಯಸ್ಥ ಧನಂಜಯ, ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ನೀಡುವ ಸಂಬಂಧ ಸಚಿವರು ಈಗಾಗಲೇ ಸೂಚಿಸಿದ್ದಾರೆ. ಉಳಿದಂತೆ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಗೌಡ, ಎಚ್‌.ಪಿ.ಶೇಖರ್, ವೈರಮುಡಿ, ಸಂತೆಕಸಲಗೆರೆ ಬಸವರಾಜು, ರಕ್ಷಣಾ ವೇದಿಕೆಯ ಮುದ್ದೇಗೌಡ, ಪ್ರವೀಣ್, ಆಟೋ ಘಟಕದ ವೆಂಕಟೇಶ್, ಸೋಮಶೇಖರ, ಮಲ್ಲೇಶ್, ದೀಪಿಕಾ, ಯೋಗೇಶ್, ಭಗವಾನ್ ಮೊದಲಾದವರಿದ್ದರು.