ಕನ್ನಡಪ್ರಭ ವಾರ್ತೆ ಕಾರವಾರ
ಏಕಾಏಕಿ ₹117ಕ್ಕೆ ಏರಿಕೆಯಾಗಿರುವ ಸೀಮೆಎಣ್ಣೆ ದರ ಇಳಿಕೆಗೆ ಆಗ್ರಹಿಸಿ ತಾಲೂಕಿನ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಬುಧವಾರ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ಸೀಮೆಎಣ್ಣೆ ದರ ಇಳಿಕೆ ಮಾಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಮೀನುಗಾರರು ಹಾಗೂ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಎಂಎಲ್ಸಿ ಗಣಪತಿ ಉಳ್ವೇಕರ್, ಅನಾದಿ ಕಾಲದಿಂದಲೂ ಬಡ ಮೀನುಗಾರರು ಸೀಮೆಎಣ್ಣೆ ಆಧಾರಿತ ಸಾಂಪ್ರದಾಯಿಕ ನಾಡದೋಣಿಗಳನ್ನು ಬಳಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಮತ್ತೊಂದೆಡೆ, ಬಂಡವಾಳಶಾಹಿಗಳು ಭಾರಿ ಯಂತ್ರಗಳನ್ನು ಬಳಸಿ ರಾತ್ರಿ ವೇಳೆ ಲೈಟ್ ಫಿಶಿಂಗ್ ಮತ್ತು ಬುಲ್‌ಟ್ರಾಲ್ ಫಿಶಿಂಗ್ ಮಾಡುತ್ತಾರೆ. ಈ ಬಂಡವಾಳಶಾಹಿಗಳಿಗೆ ಯಾಂತ್ರಿಕ ದೋಣಿಗೆ ಬಳಸುವ ಡೀಸೆಲ್ ಕೇವಲ ₹78ಗಳಿಗೆ ಸಬ್ಸಿಡಿ ದರದಲ್ಲಿ ಸಿಗುತ್ತಿದೆ. ಆದರೆ, ಬಡ ಮೀನುಗಾರರು ಬಳಸುವ ಸೀಮೆಎಣ್ಣೆಯ ದರವನ್ನು ಮಾತ್ರ ಸರ್ಕಾರ ₹117 ಗೆ ಏರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾತ್ರಿ ವೇಳೆ ನಡೆಯುವ ಯಾಂತ್ರಿಕ ಮೀನುಗಾರಿಕೆಯಿಂದಾಗಿ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರಿಗೆ ಸಮರ್ಪಕವಾಗಿ ಮೀನು ಸಿಗುತ್ತಿಲ್ಲ. ಇದರಿಂದ ಆದಾಯವೂ ಇಲ್ಲದಂತಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸೀಮೆಎಣ್ಣೆ ದರವನ್ನು ಏರಿಸಿರುವುದು ಬಡ ಮೀನುಗಾರರ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಅವರ ಜೀವನ ನಿರ್ವಹಣೆ ಅಸಾಧ್ಯವಾಗಿದೆ ಎಂದು ಅವರು ವಿವರಿಸಿದರು.
ಮುಂದಿನ 7 ದಿನಗಳ ಒಳಗೆ ಕನಿಷ್ಠ ₹60 ದರದಲ್ಲಾದರೂ ಸೀಮೆಎಣ್ಣೆ ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಬಳಿಕ ಮೀನುಗಾರರ ನಿಯೋಗವು ಜಿಲ್ಲಾಧಿಕಾರಿ ಹಾಗೂ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿತು. ಪ್ರತಿಭಟನೆಯಲ್ಲಿ ತಾಲೂಕಿನ ನೂರಾರು ನಾಡದೋಣಿ ಮೀನುಗಾರರು ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.