ಸಾರಾಂಶ
ಶಿಗ್ಗಾಂವಿ ತಾಲೂಕಿನಲ್ಲಿ ನಿರಂತರ ಮಳೆಯಿಂದ ಬೆಳೆಗಳು ಹಾನಿಯಾಗಿವೆ. ಗೋವಿನಜೋಳ, ಸೋಯಾಬೀನ್, ಹತ್ತಿ ಇತ್ತೀಚಿಗೆ ಎಡಬಿಡದೇ ಸುರಿದ ಮಳೆಯಿಂದ ಬಹುತೇಕ ಕಡೆ ಹಾನಿಯಾಗಿವೆ. ಬೆಳೆ ಹಾನಿ ಹಾಗೂ ಬೆಳೆ ವಿಮೆ ನೀಡಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿ ಹಾವೇರಿ ಜಿಲ್ಲಾಧಿಕಾರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಶಿಗ್ಗಾಂವಿ: ತಾಲೂಕಿನಲ್ಲಿ ನಿರಂತರ ಮಳೆಯಿಂದ ಬೆಳೆಗಳು ಹಾನಿಯಾಗಿವೆ. ಗೋವಿನಜೋಳ, ಸೋಯಾಬೀನ್, ಹತ್ತಿ ಇತ್ತೀಚಿಗೆ ಎಡಬಿಡದೇ ಸುರಿದ ಮಳೆಯಿಂದ ಬಹುತೇಕ ಕಡೆ ಹಾನಿಯಾಗಿವೆ. ಬೆಳೆ ಹಾನಿ ಹಾಗೂ ಬೆಳೆ ವಿಮೆ ನೀಡಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿ ಹಾವೇರಿ ಜಿಲ್ಲಾಧಿಕಾರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.ಪ್ರಾರಂಭ ಹಂತದಲ್ಲಿ ಮಳೆ ಪ್ರಾರಂಭವಾಗಿ ಬಿತ್ತಿದ ಬೀಜಗಳು ಮಳೆ ಹೋಗಿ ಮೊಳಕೆ ಒಡೆಯದೇ ಹಾಳಾಗಿದ್ದು, ಮರು ಬಿತ್ತನೆ ಮಾಡಿದ ಉದಾಹರಣೆ ತಾಲೂಕಿನಲ್ಲಿ ಹಲವು ಕಡೆ ಆಗಿದೆ. ಬಿತ್ತನೆ ಮಾಡಿದ ರೈತರು ಕಳೆಯನ್ನು ತೆಗೆಸಲಿಕ್ಕೆ ಹೋದರೆ ಎಡೆಬಿಡದೇ ಮಳೆ ಪ್ರಾರಂಭವಾಗಿ ಎಡೆ ಕುಂಟೆ ಹೊಡೆಯಲು ಆಗದೇ ರೈತ ಹೈರಾಣಾಗಿದ್ದಾನೆ. ಬೆಳೆಗಳಿಗಿಂತ ಕಸವೇ ಹೆಚ್ಚಾಗಿದ್ದು ಬೆಳೆಯುವ ಹಂತದಲ್ಲಿ ಪೈರು ಕ್ಷೀಣಗೊಂಡಿದ್ದು ಇಳುವರಿ ಸಹಿತ ಬರುವ ಲೆಕ್ಕಕ್ಕೆ ಬೆಳೆಗಳು ಕಾಣದಂತಾಗಿದೆ.
ಬಿತ್ತನೆ ಬೀಜ, ಗೊಬ್ಬರ ಸಾವಿರಾರು ರು. ಖರ್ಚು ಮಾಡಿದ ಸುಮಾರು ರೈತರು ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೆನ್ನದೆ ಚಿಂತಾಕ್ರಾಂತನಾಗಿದ್ದಾನೆ. ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿದ್ದು ಗೋವಿನಜೋಳ ಹಾಗೂ ಸೋಯಾಬೀನ್ ಬೆಳೆ ಆರಂಭಿಕ ಹಂತದಲ್ಲಿಯೇ ಕುಂಟಿತಗೊಂಡಿದೆ. ಇದನ್ನು ಅರಿತ ಸುಮಾರು ಜನ ರೈತರು ಬೆಳೆವಿಮೆ ತುಂಬಿದ್ದಾರೆ.ಈಗಾಗಲೇ ತಾಲೂಕಿನಲ್ಲಿ ಬೆಳೆ ಹಾನಿಯಾಗಿದ್ದು, ಕೇವಲ ೧೦೦೨ ಹೆಕ್ಟೇರ್ ಪ್ರದೇಶ ಹಾನಿಯಾದ ವರದಿ ಕೊಟ್ಟಿದ್ದು ರೈತರಿಗೆ ಅಧಿಕಾರಿಗಳಿಂದ ಬಹಳ ನೋವಾಗಿದೆ. ರೈತರ ಜೀವದ ಜೊತೆ ಆಟವಾಡದೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡಿ ಪರಿಹಾರ ಕೊಡದೇ ಹೋದಲ್ಲಿ ತಾಲೂಕಿನಲ್ಲಿ ಸಾಲಸೂಲ ಮಾಡಿದ ರೈತರು ಆತ್ಮಹತ್ಯೆಗೆ ಶರಣಾದರೇ ಇದಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ. ಆದ್ದರಿಂದ ಕೂಡಲೇ ರೈತರಿಗೆ ಹಾನಿ ಮತ್ತು ಫಸಲ ಭೀಮಾ ಯೋಜನೆಯಡಿಯಲ್ಲಿ ವಿಮೆ ಪರಿಹಾರ ವಿತರಿಸಬೇಕೆಂದು ಈ ಮೂಲಕ ಶಿಗ್ಗಾಂವಿ ತಾಲೂಕು ನೊಂದ ರೈತ ಪಡೆ ಮನವಿಯಲ್ಲಿ ತಿಳಿಸಲಾಗಿದೆರೈತ ಮುಖಂಡ ಶಶಿಧರ ಹೊಣ್ಣನವರ ಮಾತನಾಡಿ, ಬೆಳೆ ಹಾನಿ ಬೆಳೆ ಪರಿಹಾರ ಎಂಟು ದಿನದೊಳಗೆ ನೀಡದೆ ಇದ್ದರೆ ತಾಲೂಕಿನ ಕೋಣನಕೇರಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಬೇಕಾಗುತ್ತದೆ. ಅದಕ್ಕೂ ತಾವು ಒಪ್ಪಿಕೊಳ್ಳದೆ ಇದ್ದರೆ ಎನ್.ಎಚ್.೪ ಹೆದ್ದಾರಿಯನ್ನು ಬಂದ್ ಮಾಡಿ ಹಂತ ಹಂತವಾಗಿ ಉಗ್ರವಾದ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಹನುಮಂತಪ್ಪ ತೆಮ್ಮಿನಕೊಪ್ಪ, ಮಲ್ಲೇಶಪ್ಪ ಬೂದಿಹಾಳ, ಶಂಭು ಕುರಗೋಡಿ, ಮುತ್ತಪ್ಪ ಗುಡಗೇರಿ, ಸಂತೋಷ ಹುಣಶ್ಯಾಳ, ವಿಶ್ವನಾಥ ಹರವಿ, ಸಂತೋಷ ದೊಡ್ಡಮನಿ, ಉಮೇಶ ಅಂಗಡಿ, ಚಂದ್ರಣ್ಣಾ ಬೆಳವತ್ತಿ, ಪ್ರವೀಣ ಗುಳಣ್ಣವರ, ವಿರುಪಾಕ್ಷಪ್ಪ ಆಡಿನ, ಶಂಭಣ್ಣಾ ಕಡಕೋಳ, ರಾಜು ದೊಡ್ಡಮನಿ, ಪ್ರವೀಣ ಹಾವಣಗಿ, ನಿಂಗಣ್ಣಾ ಹರಿಜನ, ಬಸವಣ್ಣೆಪ್ಪ ಗುಳೆನಕೇರಿ, ಗದಗಯ್ಯ ಹಿರೇಮಠ, ದೇವಣ್ಣಾ ಹಳವಳ್ಳಿ ಉಮೇಶ ಹುಬ್ಬಳ್ಳಿ, ಸುರೇಶ ತಳವಾರ, ಮಂಜುನಾಥ ಬುಡಪ್ಪನವರ, ಮಹಾಂತೇಶ ಕಮ್ಮಾರ, ಜಗದೀಶ ಶಿದ್ದಪ್ಪನವರ, ಶಂಕರಪ್ಪ ಕಲಕಟ್ಟಿ, ದುಂಡಪ್ಪ ರಾಯಣ್ಣವರ ಸೇರಿದಂತೆ ಹಲವಾರು ಮುಖಂಡರುಗಳು ಇದ್ದರು. ಇದಕ್ಕೂ ಪೂರ್ವದಲ್ಲಿ ಶಿಗ್ಗಾಂವಿ ಪಟ್ಟಣದ ವೀರರಾಣಿ ಚೆನ್ನಮ್ಮ ವೃತ್ತದಿಂದ ನೂರಾರು ರೈತರು ಸೇರಿಕೊಂಡು ಮೆರವಣಿಗೆಯ ಮೂಲಕ ತಹಸೀಲ್ದಾರ್ ಕಚೇರಿಯವರೆಗೆ ಜಾಂಝ, ಹಲಗೆಯನ್ನು ಬಾರಿಸುತ್ತಾ ಸರಕಾರದ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ತಹಸೀಲ್ದಾರ್ ಯಲ್ಲಪ್ಪ ಗೋಣೆನ್ನವರ ಅವರಿಗೆ ಮನವಿ ಸಲ್ಲಿಸಿದರು.