ದೇವದಾಸಿಯರ ಸಹಾಯಧನ ಬಿಡುಗಡೆಗೆ ಆಗ್ರಹಿಸಿ ಧರಣಿ

| Published : Dec 05 2024, 12:30 AM IST

ಸಾರಾಂಶ

ದೇವದಾಸಿಯರಿಗೆ ನೀಡುತ್ತಿದ್ದ ಮಾಸಿಕ ಸಹಾಯಧನ ಬಾಕಿ ಇದ್ದು, ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ದೇವದಾಸಿ ಮಹಿಳೆಯ ವಿಮೋಚನಾ ಸಂಘ ಹಾಗೂ ದೇವದಾಸಿಯರ ಮಕ್ಕಳ ಹಕ್ಕುಗಳ ಹೋರಾಟ ಸಮಿತಿ ಧರಣಿ ನಡೆಸಿತು.

ಕರ್ನಾಟಕ ದೇವದಾಸಿ ಮಹಿಳೆಯ ವಿಮೋಚನಾ ಸಂಘ ಹಾಗೂ ದೇವದಾಸಿಯರ ಮಕ್ಕಳ ಹಕ್ಕುಗಳ ಹೋರಾಟ ಸಮಿತಿಯಿಂದ ಹೋರಾಟ

ಕನ್ನಡಪ್ರಭ ವಾರ್ತೆ ಕೊಪ್ಪಳ

ದೇವದಾಸಿಯರಿಗೆ ನೀಡುತ್ತಿದ್ದ ಮಾಸಿಕ ಸಹಾಯಧನ ಬಾಕಿ ಇದ್ದು, ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ದೇವದಾಸಿ ಮಹಿಳೆಯ ವಿಮೋಚನಾ ಸಂಘ ಹಾಗೂ ದೇವದಾಸಿಯರ ಮಕ್ಕಳ ಹಕ್ಕುಗಳ ಹೋರಾಟ ಸಮಿತಿ ಧರಣಿ ನಡೆಸಿತು.

ಬಾಕಿ ಮಾಸಿಕ ಸಹಾಯಧನ ಬಿಡುಗಡೆ ಮಾಡಿ, ದೇವದಾಸಿಯರಿಗೆ ಕಳೆದ ಬಜೆಟ್‌ನಲ್ಲಿ ಹೆಚ್ಚಳ ಮಾಡಿದ ₹೫೦೦ ಸೇರಿದಂತೆ ಬಾಕಿ ಮಾಸಿಕ ಸಹಾಯಧನವು ಹಲವಾರು ತಿಂಗಳುಗಳಿಂದ ಬಾಕಿ ಉಳಿದಿದ್ದು, ಈ ಕೂಡಲೇ ಬಿಡುಗಡೆ ಮಾಡಬೇಕು. ನೂರಾರು ಮಹಿಳೆಯರಿಗೆ ಒಂದೆರಡು ಬಾರಿ ಮಾತ್ರವೇ ಮಾಸಿಕ ಸಹಾಯಧನ ಬಂದು ನಂತರ ನಿಂತು ಹೋಗಿದೆ. ಈ ಎಲ್ಲ ಮಹಿಳೆಯರ ಬಾಕಿ ಹಣ ದೊರೆಯುವಂತೆ ಸೂಕ್ತ ಕ್ರಮವಹಿಸಬೇಕು.

ಅದೇ ರೀತಿ ಪ್ರತಿಬಾರಿಯೂ ಕೆಲವರಿಗೆ ಸಹಾಯಧನ ಹಣ ಜಮಾ ಆಗದಿರುವುದು ಕಂಡು ಬಂದಿದೆ. ಆದರೆ ಅಧಿಕಾರಿಗಳು ಹಣ ಹಾಕಲಾಗಿದೆ ಎಂದು ಉತ್ತರ ನೀಡುತ್ತಿದ್ದಾರೆ ಮತ್ತು ಬೇರೆ ಬ್ಯಾಂಕ್ ಖಾತೆಗೆ ಜಮಾ ಆಗಿರಬೇಕೆಂದು ಉತ್ತರಿಸುತ್ತಿದ್ದಾರೆ. ಮಹಿಳೆಯರು ಕೊಟ್ಟ ಬ್ಯಾಂಕ್ ಖಾತೆಗೆ ಜಮಾ ಆಗುವ ಬದಲು ಬೇರೆ ಖಾತೆಗೆ ಜಮಾ ಆಗಿದೆಯೆಂದು ಹೇಳುವುದರ ಹಿಂದೆ ವಂಚನೆಯ ವಾಸನೆ ಇದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ದೇವದಾಸಿಯರ ಕುಟುಂಬದ ಸದಸ್ಯರ ಗಣತಿ ಮಾಡಬೇಕು. ಈಗಾಗಲೇ ನಡೆಸಲಾದ ಎರಡು ಬಾರಿಯ ಗಣತಿಯಲ್ಲಿ ಸಾವಿರಾರು ಕುಟುಂಬಗಳು ಬಿಟ್ಟು ಹೋಗಿದ್ದು, ಅವರನ್ನು ಪರಿಗಣಿಸುವಂತೆ ಆಗ್ರಹಿಸಿದರು.

ಜಿ.ಹುಲಿಗೆಮ್ಮ, ಮಂಜುನಾಥ ಡಗ್ಗಿ, ಸುಂಕಪ್ಪ ಗದಗ, ಮರಿಯಮ್ಮ, ಮೈಲಮ್ಮ ಮೊದಲಾದವರು ನೇತೃತ್ವ ವಹಿಸಿದ್ದರು.