ಬ್ಯಾಡಗಿ: ಅಗಸನಹಳ್ಳಿ ಗ್ರಾಮದ ಜತ್ತಿಕಟ್ಟಿ ಕೆರೆಗೆ ನೀರು ತುಂಬಿಸುವುದು, ಹೂಳು ತೆರವುಗೊಳಿಸಿ ಕೆರೆಯನ್ನು ಅಭಿವೃದ್ಧಿಪಡಿಸಿ ಹಾಗೂ ಕೆರೆಯ ಸುತ್ತಲಿನ ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿ ಅಗಸನಹಳ್ಳಿ ನಿವಾಸಿಗಳು ಹಾಗೂ ರೈತರು ಸೋಮವಾರ ಪಟ್ಟಣದಲ್ಲಿ ಚಕ್ಕಡಿ ಮೆರವಣಿಗೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.
ಅಗಸನಹಳ್ಳಿ ಶಿಬಾರದಿಂದ ಹಲವು ಚಕ್ಕಡಿಗಳೊಂದಿಗೆ ಹೊರಟ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗುತ್ತ ತಾಲೂಕು ಕಚೇರಿ ವರೆಗೆ ಮೆರವಣಿಗೆ ನಡೆಸಿ, ಬಳಿಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಬಳಿಕ ಮಾತನಾಡಿದ ಅಗಸನಹಳ್ಳಿ ನಿವಾಸಿ ಅಮೃತಗೌಡ ಕೆಂಚನಗೌಡ್ರು, ಗ್ರಾಮದ ಬಳಿ ಇರುವ ಸುಮಾರು 24 ಎಕರೆ ವಿಸ್ತೀರ್ಣದ ಜತ್ತಿಕಟ್ಟಿ ಕೆರೆ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹೂಳು ತುಂಬಿಕೊಂಡಿದೆ. ಇದರಿಂದ ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗದೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಪರಿಣಾಮ ರೈತರು ನೀರಿನ ಅಭಾವದಿಂದ ಕೃಷಿ ಮಾಡಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಹೂಳು ತೆಗೆಸಿ: ರೈತ ಶಿವು ಕಲ್ಲಾಪುರ ಮಾತನಾಡಿ, "ಕೆರೆಗಳು ರೈತರ ಜೀವನಾಡಿಯಾಗಿವೆ. ಕೆರೆಗಳು ತುಂಬಿದ್ದರೆ ಅಂತರ್ಜಲ ಮಟ್ಟ ಹೆಚ್ಚಳವಾಗಿ ಬಾವಿ, ಕೊಳವೆಬಾವಿಗಳಿಗೆ ನೀರು ಸಿಗುತ್ತದೆ. ಮಳೆ ಕೈಕೊಟ್ಟ ಸಂದರ್ಭದಲ್ಲೂ ಕೆರೆಗಳು ರೈತರಿಗೆ ಆಸರೆಯಾಗುತ್ತವೆ. ಆದರೆ ಅಗಸನಹಳ್ಳಿ ಕೆರೆ ಸಂಪೂರ್ಣ ಹೂಳು ತುಂಬಿಕೊಂಡಿರುವುದರಿಂದ ನೀರು ನಿಲ್ಲುತ್ತಿಲ್ಲ. ಆದ್ದರಿಂದ ತಕ್ಷಣ ಹೂಳು ತೆರವುಗೊಳಿಸಿ ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.ಅತೀಕ್ರಮಣ ತೆರವುಗೊಳಸಿ: ಈಶ್ವರ ಮಠದ ಮಾತನಾಡಿ, "24 ಎಕರೆ ವಿಸ್ತೀರ್ಣದ ಕೆರೆಯ ಜಾಗವನ್ನು ಹಲವು ಮಂದಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಪ್ರಶ್ನಿಸಿದರೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರ ತಕ್ಷಣ ಸರ್ವೇ ನಡೆಸಿ ಅತಿಕ್ರಮಣ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಅರಳಿಕಟ್ಟಿ ಗ್ರಾಮಕ್ಕೆ ರಸ್ತೆ ನಿರ್ಮಿಸಿ: ಕೆರೆಯ ಮಧ್ಯಭಾಗದಿಂದ ಅರಳಿಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಮಳೆಗಾಲದಲ್ಲಿ ಸಂಚಾರ ದುಸ್ತರವಾಗಿದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಗ್ರಾಮಗಳ ನಡುವಿನ ಸಂಪರ್ಕ ಸುಗಮವಾಗುವುದರ ಜೊತೆಗೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಈ ವೇಳೆ ಎಂ.ಎನ್. ನಾಯಕ ಸೇರಿದಂತೆ ಅಗಸನಹಳ್ಳಿ ನಿವಾಸಿಗಳು ಹಾಗೂ ನೂರಾರು ಜನರು ಉಪಸ್ಥಿತರಿದ್ದರು.