ಜಿ.ಟಿ.ದೇವೇಗೌಡರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಪ್ರತಿಭಟನೆ

| Published : Aug 23 2025, 02:00 AM IST

ಸಾರಾಂಶ

ಸಹಕಾರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡುವ ಮೂಲಕ ಸಹಕಾರ ಕ್ಷೇತ್ರವನ್ನು ಮುಳುಗಿಸಿಬಿಡಿ, ಸರ್ವನಾಶ ಮಾಡಿಬಿಡಿ ಎಂದು ಜಿ.ಟಿ.ದೇವೇಗೌಡ ಮಾತನಾಡಿದ್ದಾರೆ. ಇದರಿಂದ ರಾಜ್ಯದ ಬಹುಸಂಖ್ಯಾತರಾದ ದಲಿತ ವರ್ಗಕ್ಕೆ ಅಪಾರ ಮಾನಹಾನಿಯಾಗಿದೆ.

ಮಂಡ್ಯ: ದಲಿತರನ್ನು ಅಪಮಾನ ಮಾಡಿದ ಜಿ.ಟಿ.ದೇವೇಗೌಡರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸಂವಿಧಾನ ವೇದಿಕೆ ಕಾರ್‍ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಕಾರ್‍ಯಕರ್ತರು, ದಲಿತರ ಬಗ್ಗೆ ಲಘುವಾಗಿ ಮಾತನಾಡಿರುವ ಜಿ.ಟಿ.ದೇವೇಗೌಡರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿದರು. ನಂತರ ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ವಿಧಾನ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಸಹಕಾರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡುವ ಮೂಲಕ ಸಹಕಾರ ಕ್ಷೇತ್ರವನ್ನು ಮುಳುಗಿಸಿಬಿಡಿ, ಸರ್ವನಾಶ ಮಾಡಿಬಿಡಿ ಎಂದು ಜಿ.ಟಿ.ದೇವೇಗೌಡ ಮಾತನಾಡಿದ್ದಾರೆ. ಇದರಿಂದ ರಾಜ್ಯದ ಬಹುಸಂಖ್ಯಾತರಾದ ದಲಿತ ವರ್ಗಕ್ಕೆ ಅಪಾರ ಮಾನಹಾನಿಯಾಗಿದೆ ಎಂದು ದೂರಿದರು.

ದಲಿತರಿಗೆ ಪ್ರಾತಿನಿಧ್ಯ ನೀಡಿದರೆ ಸಹಕಾರ ಕ್ಷೇತ್ರ ಸರ್ವ ನಾಶವಾಗುವುದೇ? ದಲಿತರ ಬಗ್ಗೆ ಕೀಳು ಮನೋಭಾವನೆ ಹೊಂದಿರುವ ಮೂಲಕ ದಲಿತರನ್ನು ಅಪಮಾನ ಮಾಡಿರುವ ಜಿ.ಟಿ. ದೇವೇಗೌಡ ವಿರುದ್ಧ ಅಟ್ರಾಸಿಟಿ ಮೊಕದ್ದಮೆ ದಾಖಲಿಸಬೇಕು. ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಜೆಡಿಎಸ್ ಪಕ್ಷ ಇವರನ್ನು ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಎಂ.ವಿ.ಕೃಷ್ಣ, ಗಂಗರಾಜು, ಕುಮಾರ, ಎಸ್. ಸೋಮಶೇಖರ್, ಪ್ರಮೋದ್, ಶಿವರಾಜ್‌ಕುಮಾರ್, ನಿತ್ಯಾನಂದ, ನರಸಿಂಹರಾಜು, ಸಂಜೀವ, ವೀರಭದ್ರ, ಯೋಗಾನಂದ ಸೇರಿ ಹಲವರು ಭಾಗವಹಿಸಿದ್ದರು.