ಕಂಪ್ಲಿ ಸಕ್ಕರೆ ಕಾರ್ಖಾನೆ ಪುನಾರಂಭಿಸಲು ಆಗ್ರಹಿಸಿ ಪ್ರತಿಭಟನೆ

| Published : Dec 25 2024, 12:46 AM IST

ಸಾರಾಂಶ

ಕಂಪ್ಲಿಯಲ್ಲಿನ ಸಕ್ಕರೆ ಕಾರ್ಖಾನೆ ಪುನಾರಂಭವಾಗಬೇಕೆಂಬುದು ಕ್ಷೇತ್ರದ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದೆ.

ಕಂಪ್ಲಿ: ಚುನಾವಣೆ ವೇಳೆ ಕಂಪ್ಲಿಯ ಸಕ್ಕರೆ ಕಾರ್ಖಾನೆ ಪುನಾರಂಭಿಸುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷ ಅಧಿಕಾರಕ್ಕೆ ಬಂದು 2 ವರ್ಷ ಕಳೆಯುತ್ತಾ ಬಂದರೂ ಚಕಾರ ಎತ್ತದಿರುವುದು ಖಂಡನೀಯ ಎಂದು ಕಿಸಾನ್ ಜಾಗೃತಿ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ಗಂಗಾಧರ್ ತಿಳಿಸಿದರು.

ಪಟ್ಟಣದಲ್ಲಿ ಸಕ್ಕರೆ ಕಾರ್ಖಾನೆ ಪುನಾರಂಭಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕಂಪ್ಲಿಯಲ್ಲಿನ ಸಕ್ಕರೆ ಕಾರ್ಖಾನೆ ಪುನಾರಂಭವಾಗಬೇಕೆಂಬುದು ಕ್ಷೇತ್ರದ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದೆ. ಸಕ್ಕರೆ ಕಾರ್ಖಾನೆ ಆರಂಭದಿಂದ ಈ ಭಾಗದ ರೈತರಿಗೆ ಹಾಗೂ ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ. ಪಟ್ಟಣವು ಅಭಿವೃದ್ಧಿಯತ್ತ ಸಾಗಲಿದೆ. ವಿಧಾನಸಭಾ ಚುನಾವಣೆಯ ವೇಳೆ ಕುರುಗೋಡಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಹಕಾರಿ ಅಥವಾ ಸರ್ಕಾರಿ ಒಡೆತನದಲ್ಲಿ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸುವ ಭರವಸೆ ನೀಡಿದ್ದರು. ಈಗಲಾದರೂ ಸರ್ಕಾರ ಎಚ್ಚತ್ತು ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸುವ ಮೂಲಕ ಕ್ಷೇತ್ರದ ಜನತೆಗೆ ಅನುಕೂಲತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇಲ್ಲಿನ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಸಮಾವೇಶಗೊಂಡಿತು.

ಈ ಸಂದರ್ಭದಲ್ಲಿ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ ಗುಬಾಜಿ ರಾಮಾಂಜಿನಿ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವಿ.ಉಷಾ ದೇವೇಂದ್ರ, ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ಹರ್ಷಿತ್, ಪ್ರಮುಖರಾದ ಹನುಮಂತಪ್ಪ, ಗಾದಿಲಿಂಗಪ್ಪ, ಬಾಬುಸಾಬ್, ಎಂ.ಲಕ್ಷ್ಮಿ ರೆಡ್ಡಿ, ಮುಸ್ತಾಫ್ ಇದ್ದರು.