ಸಾರಾಂಶ
ಅಂಗನವಾಡಿ ಕೇಂದ್ರದಲ್ಲಿ ಎಲ್ ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಶಹಾಪುರ ನಗರದಲ್ಲಿ ಅಂಗನವಾಡಿ ನೌಕರರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಶಹಾಪುರ
ಹಾಲಿ ಇರುವ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ನಡೆಸಲು ಅನುಮತಿ ನೀಡಬೇಕು. ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆ ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿ ಯಾದಗಿರಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಸಾವಿರಾರು ಜನ ಅಂಗನವಾಡಿ ಕಾರ್ಯಕರ್ತೆಯರು ನಗರದ ಬಸವೇಶ್ವರ ವೃತ್ತದಿಂದ ಸಚಿವರ ಮನೆಯವರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸಚಿವರ ಮನೆ ಧರಣಿ ಸತ್ಯಾಗ್ರಹ ನಡೆಸಿದರು.
ಈ ವೇಳೆ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಬಸಲಿಂಗಮ್ಮ ನಾಟೇಕರ್, ಪ್ರಸಕ್ತ ಸಾಲಿನಿಂದ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ತೆರೆಯಲು ಹೊರಟಿರುವ ರಾಜ್ಯ ಸರಕಾರ, ಆ ತರಗತಿಗಳನ್ನು (ಎಲ್‌ಕೆಜಿ, ಯುಕೆಜಿ) ಅಂಗನವಾಡಿ ಕೇಂದ್ರಗಳಲ್ಲೆ ಆರಂಭಿಸಬೇಕು ಎಂದು ಆಗ್ರಹಿಸಿದರು.ರಾಜ್ಯ ಸರ್ಕಾರ ಹಲವು ನೀತಿಗಳನ್ನು ರೂಪಿಸಿ, ಅಂಗನವಾಡಿ ನೌಕರರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭಿಸುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ಕ್ರಮೇಣ ಮುಚ್ಚಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ದೂರಿದರು.
ಸಂಘದ ಜಿಲ್ಲಾ ಮುಖಂಡರಾದ ನಸೀಮಾ ಸುರಪುರ ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಟಿಕತೆ ಎರಡರ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ. ಹೊಸದಾಗಿ ಎಲ್‌ಕೆಜಿ ಯುಕೆಜಿ ಪ್ರಾರಂಭಿಸುವ ಆದೇಶ ನಿಲ್ಲಿಸಬೇಕು ಮತ್ತು 1008 ಅಂಗನವಾಡಿ ಕೇಂದ್ರ ಗುರುತಿಸಿ, ಅಲ್ಲಿಯೇ ಈ ತರಗತಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿ, ಅಂಗನವಾಡಿ ಕೇಂದ್ರಗಳ ಮೇಲೆ ನೂರಾರು ಬಡವರು ಅವಲಂಬಿತರಾಗಿದ್ದಾರೆ. ಒಂದು ವೇಳೆ ಅವುಗಳನ್ನು ಮುಚ್ಚಿದರೆ ಲಕ್ಷಾಂತರ ಮಂದಿಗೆ ತೊಂದರೆಯಾಗುತ್ತದೆ, ದೇಶದ ಪ್ರಗತಿಗೆ ಪೂರಕರಾದ ಅಂಗನವಾಡಿ ಕಾರ್ಯಕರ್ತೆಯರನ್ನು ಬೀದಿಗೆ ತರುವುದು ಯಾವ ನ್ಯಾಯ? ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಅಂಗನವಾಡಿ ನೌಕರ ಸಂಘದ ಜಿಲ್ಲಾಧ್ಯಕ್ಷೆ ಅನಿತಾ ಹಿರೇಮಠ್, ಯಮನಮ್ಮ ದೋರನಹಳ್ಳಿ, ಬಸಮ್ಮ ಸುರಪುರ, ಕವಿತಾ, ರಾಧಾ, ರೇಣುಕಾ ಗೋಗಿ, ಲಕ್ಷ್ಮೀ ಶಹಾಪುರ, ಮಹಾದೇವಿ ಕಾಡಮಗೇರಾ, ಮಹಾನಂದಾ, ಸಂಪತ್ ಕುಮಾರಿ, ಅನ್ನಪೂರ್ಣ, ಮಂಜುಳಾ, ಲಕ್ಷ್ಮಿ ಗೋಗಿ, ಶಾರದಾ ನಂದಿಹಳ್ಳಿ, ವಿಜಯಲಕ್ಷ್ಮಿ, ರಾಜಲಕ್ಷ್ಮಿ, ಮರಲಿಂಗಮ್ಮ, ಸಿರಿದೇವಿ, ಸರಸ್ವತಿ, ಬಸಲಿಂಗಮ್ಮ, ಮಲ್ಲಮ್ಮ, ಪರ್ವೀನ್ ಸುರಪುರ ಸೇರಿದಂತೆ ಇತರರಿದ್ದರು.