ಎಡಿಜಿಪಿ ಚಂದ್ರಶೇಖರ್ ಅಮಾನತ್ತಿಗೆ ಒತ್ತಾಯಿಸಿ ಪ್ರತಿಭಟನೆ

| Published : Oct 02 2024, 01:20 AM IST

ಸಾರಾಂಶ

ರಾಮನಗರ: ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ .ಡಿ.ಕುಮಾರಸ್ವಾಮಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಮನಗರ: ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ .ಡಿ.ಕುಮಾರಸ್ವಾಮಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಸೇರಿದ ಉಭಯ ಪಕ್ಷಗಳ ಕಾರ್ಯಕರ್ತರು ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.

ಐಪಿಎಸ್ ಅಧಿಕಾರಿ ಚಂದ್ರಶೇಖರ್ ಸರ್ಕಾರದ ಚಮಚದಂತೆ ವರ್ತಿಸುತ್ತಿದ್ದಾರೆ. ಕುಮಾರಸ್ವಾಮಿಯವರ ವಿರುದ್ಧ ಹಗುರವಾಗಿ ಮಾತನಾಡುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ. ಅವರ ಭ್ರಷ್ಟಾಚಾರಗಳು ಮಿತಿ ಮೀರಿವೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಜೆಡಿಎಸ್ ರಾಜ್ಯ ವಕ್ತಾರ ನರಸಿಂಹಮೂರ್ತಿ ಮಾತನಾಡಿ, ಮುಖ್ಯಮಂತ್ರಿಗಳಿಗೆ ಇಷ್ಟವಿದ್ದರೆ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರನ್ನು ಕಾನೂನು ಸಲಹೆಗಾರರನ್ನಾಗಿ ಮಾಡಿಕೊಳ್ಳಲಿ. ಚಂದ್ರಶೇಖರ್ ಗೆ ಇಷ್ಟವಿದ್ದರೆ ಖಾಕಿ ಕಳಚಿ ರಾಜಕಾರಣಕ್ಕೆ ಬರಲಿ. ಸರ್ಕಾರವನ್ನು ಓಲೈಸಲು ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

ಚಂದ್ರಶೇಖರ್ ರವರ ವಿರುದ್ಧ ಅಧಿಕಾರ ದುರುಪಯೋಗ, ಸುಲಿಗೆ, ಬ್ಲ್ಯಾಕ್ ಮೇಲೆ ಇನ್ನಿತರ ಆರೋಪಗಳು ಕೇಳಿ ಬಂದಿವೆ. ಇದೇ ರೀತಿಯಾಗಿ ವರ್ತನೆ ಮುಂದುವರೆಸಿದರೆ ಮಾನನಷ್ಟ ಮೊಕದ್ದಮೆ, ಅಧಿಕಾರ ದುರುಪಯೋಗ, ಹಕ್ಕುಚ್ಯುತಿಯಂತಹ ಕಾನೂನು ಹೋರಾಟಗಳನ್ನು ಜೆಡಿಎಸ್ ವತಿಯಿಂದ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ಅಧಿಕಾರ ಎನ್ನುವುದು ಯಾರಿಗೂ ಶಾಶ್ವತ ಅಲ್ಲ. ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಚಂದ್ರಶೇಖರ್ ರವರು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವುದು ಖಂಡನೀಯ. ಸರ್ಕಾರಿ ಅಧಿಕಾರಿಗಳಿಗೆ ತಮ್ಮದೇ ಆದ ಪ್ರೋಟೋಕಾಲ್ ಇರುತ್ತದೆ. ಅದನ್ನು ಮೀರಿ ಕೇಂದ್ರ ಸಚಿವರ ವಿರುದ್ಧ ಅವಹೇಳನಕಾರಿ ಪದ ಬಳಸಿರುವ ಚಂದ್ರಶೇಖರ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಡಿಜಿಪಿ ಚಂದ್ರಶೇಖರ್ ಕೇಂದ್ರ ಸಚಿವರ ಬಗ್ಗೆ ಬಳಸಿರುವ ವಾಕ್ಯವನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸೇರಿದಂತೆ ಬಹುತೇಕ ಸಚಿವರು ಸಮರ್ಥನೆ ಮಾಡುತ್ತಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ, ಕಾಂಗ್ರೆಸ್ ನಾಯಕರು ನೇರವಾಗಿ ಕುಮಾರಸ್ವಾಮಿಯವರ ವಿರುದ್ಧ ಮಾತನಾಡದೆ ಜನರ ತೆರಿಗೆ ಹಣದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳಿಂದ ಕುಮಾರಸ್ವಾಮಿ ವಿರುದ್ಧ ಮಾತನಾಡಿಸುತ್ತಿರುವುದು ಅನುಮಾನ ಮೂಡುವಂತಿದೆ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮಾತನಾಡಿ, ಎಡಿಜಿಪಿ ಚಂದ್ರಶೇಖರ್ ಆಂಧ್ರ ಮೂಲದ ವ್ಯಕ್ತಿಯಾಗಿದ್ದು, ಅಧಿಕಾರ ಅವಧಿಯಲ್ಲಿ ಕೋಟ್ಯಂತರ ರು.ಗಳ ಭ್ರಷ್ಟಾಚಾರ ಮಾಡಿದ್ದು, ಅವರ ಇಲಾಖೆ ಅಧಿಕಾರಿಗಳು ಆತನ ವಿರುದ್ಧವೇ ದೂರು ನೀಡಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಅಂತಹ ಭ್ರಷ್ಟ ಅಧಿಕಾರಿಯ ಪರವಾಗಿ ಕಾಂಗ್ರೆಸ್ ನಾಯಕರು ಮಾತನಾಡುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಅದರ ಪ್ರತಿಫಲ ಕಾಂಗ್ರೆಸ್ ನವರೇ ಅನುಭವಿಸುತ್ತಾರೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಮಂಜುನಾಥ್, ಉಮೇಶ್, ಕುಮಾರ್ ಗೂಳಿಗೌಡ, ರವಿ, ವೆಂಕಟೇಶ್, ಗ್ಯಾಬ್ರಿಯಲ್ , ಜಯಕುಮಾರ್ , ಗೋವಿಂದರಾಜು, ವಾಸು ನಾಯಕ್ , ಪಾಂಡು, ಬಿಜೆಪಿ ಮುಖಂಡರಾದ ಮುರಳೀಧರ್, ದರ್ಶನ್ ರೆಡ್ಡಿ, ಶಿವಾನಂದ, ಪದ್ಮನಾಭ, ಮಂಜು ಮತ್ತಿತರರು ಭಾಗವಹಿಸಿದ್ದರು.