ಕವಿತಾಳ ಠಾಣೆ ಪಿಎಸ್ಐ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ

| Published : Jan 07 2025, 12:16 AM IST

ಸಾರಾಂಶ

Protest by Dalit, progressive organization platform at Kavitha Maski Cross

-ಕವಿತಾಳ ಮಸ್ಕಿ ಕ್ರಾಸ್ ನಲ್ಲಿ ದಲಿತ, ಪ್ರಗತಿಪರ ಸಂಘಟನೆ ವೇದಿಕೆಯಿಂದ ಪ್ರತಿಭಟನೆ

-------

ಕನ್ನಡಪ್ರಭ ವಾತೆ ಕವಿತಾಳ

ದಲಿತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ದೌರ್ಜನ್ಯ ಎಸಗುತ್ತಿರುವ ಮತ್ತು ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಕವಿತಾಳ ಠಾಣೆ ಪಿಎಸ್ ಐ ವೆಂಕಟೇಶ ನಾಯಕ ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ವೇದಿಕೆಯಿಂದ ಪ್ರತಿಭಟನಾ ರ್‍ಯಾಲಿ, ಧರಣಿ ನಡೆಸಲಾಯಿತು.

ಮಸ್ಕಿ ಕ್ರಾಸ್ ನಲ್ಲಿ ಸೇರಿದ ವೇದಿಕೆ ಮುಖಂಡರು, ಸದಸ್ಯರು ಪಿಎಸ್ಐ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ತೋರಣದಿನ್ನಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ದಲಿತ ಮುಖಂಡರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ, ಠಾಣೆಗೆ ಬರುವ ದಲಿತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವುದು ಮತ್ತು ಪ್ರಕರಣ ದಾಖಲಿಸಲು ವಿಳಂಬ ಮಾಡುವುದು ಹಾಗೂ ದಲಿತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಪ್ರಚೋದನೆ ನೀಡಲಾಗುತ್ತಿದೆ, ಹಳ್ಳಿಗಳಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದರೂ ದಂಧೆಕೋರರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಪ.ಪಂ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ತನಿಖೆ ನಡೆಸಬೇಕು, ಅಸ್ಪೃಶ್ಯ ಸಮಾಜದವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ಮಟಕಾ, ಜೂಜಾಟ, ಇಸ್ಪೀಟ್, ಅಕ್ರಮ ಮದ್ಯ ಮಾರಾಟ, ಮರುಳು ಸಾಗಾಣಿಕೆ, ಗಾಂಜಾ ಮಾರಾಟವನ್ನು ನಿಯಂತ್ರಿಸಬೇಕು, ಪರಿಶಿಷ್ಟ ಜಾತಿ ಸಮುದಾಯದವರ ಕುಂದು ಕೊರತೆ ಸಭೆ ನಡೆಸಬೇಕು, ಪಿಎಸ್ಐರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಡಿವೈಎಸ್ಪಿ ಬಿ.ಎಸ್.ತಳವಾರ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆ ಮುಖಂಡರಾದ ಗಂಗಪ್ಪ ತೋರಣದಿನ್ನಿ, ಅಲ್ಲಮಪ್ರಭು, ಬಾಲಸ್ವಾಮಿ ಜಿನ್ನಾಪುರ, ಹುಚ್ಚಪ್ಪ ಬುಳ್ಳಾಪುರ, ಸಂತೋಷ ಕಲಶೆಟ್ಟಿ, ತುರಮುಂದೆಪ್ಪ, ಲಾಳ್ಳೆಪ್ಪ, ಅರಳಪ್ಪ ತುಪ್ಪದೂರು, ಚಂದ್ರಪ್ಪ, ಕುಪ್ಪಣ್ಣ ದೊಡ್ಡಮನಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ದಲಿತ ಮುಖಂಡರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.

------------------------

06ಕೆಪಿಕೆವಿಟಿ01: ಕವಿತಾಳ ಪಟ್ಟಣದ ಮಸ್ಕಿ ಕ್ರಾಸ್ ನಲ್ಲಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.