ಕೆಳಸೇತುವೆ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

| Published : Feb 05 2025, 12:32 AM IST

ಕೆಳಸೇತುವೆ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡದಿರುವುದರಿಂದ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬಳ್ಳಾರಿ: ನಗರದ ಕನಕ ದುರ್ಗಮ್ಮ ದೇವಸ್ಥಾನದ ಕೆಳಸೇತುವೆ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ನೇತೃತ್ವದಲ್ಲಿ

ಬಿಜೆಪಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆ ಸಂಚಾರಕ್ಕೆ ಅನುವು ಮಾಡಲಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಜ. 26ರಂದು ಬಳ್ಳಾರಿಗೆ ಭೇಟಿ ನೀಡಿದ ಸಚಿವ ರಹೀಂ ಖಾನ್‌ ಅವರಿಂದ ಉದ್ಘಾಟನೆ ಮಾಡಿಸುವುದಾಗಿ ತಿಳಿಸಲಾಗಿತ್ತು. ಆದರೆ, ಅಂದು ಉದ್ಘಾಟನೆಯಾಗಲಿಲ್ಲ. ಜ. 31ರಂದು ಕಾಮಗಾರಿ ಸಂಪೂರ್ಣಗೊಳಿಸಿದರೂ, ಈ ವರೆಗೂ ಸಂಚಾರಕ್ಕೆ ಅವಕಾಶ ನೀಡಿಲ್ಲ ಎಂದು ಶಾಸಕ ವೈ.ಎಂ. ಸತೀಶ್ ತಿಳಿಸಿದರು.

ವಿನಾಕಾರಣ ರಸ್ತೆ ಸಂಚಾರಕ್ಕೆ ನಿರ್ಬಂಧವಿಧಿಸಲಾಗಿದೆ. ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆಗೊಳಿಸದೆ ಇರುವುದಕ್ಕೆ ಕಾರಣಗಳೇನು? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರಲ್ಲದೆ, ರಸ್ತೆ ಅಭಿವೃದ್ಧಿ ನೆಪದಲ್ಲಿ ಸಂಚಾರ ಬಂದ್ ಮಾಡಿರುವುದರಿಂದ ನಗರದ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಆಸ್ಪತ್ರೆ, ಶಾಲಾ, ಕಾಲೇಜುಗಳಿಗೆ ತೆರಳುವವರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಮುಗಿದಿದ್ದರೂ ರೈಲ್ವೆ ಇಲಾಖೆಯಿಂದ ಕಾಮಗಾರಿ ಬಾಕಿಯಿದೆ ಎಂದು ಸುಳ್ಳು ಬ್ಯಾನರ್‌ ಹಾಕಿದ್ದು, ಇದಕ್ಕೆ ರೈಲ್ವೆ ಇಲಾಖೆ ಪತ್ರದ ಮೂಲಕ ಯಾವುದೇ ಕಾಮಗಾರಿ ಬಾಕಿಯಿಲ್ಲಎಂದು ಸ್ಪಷ್ಟ ಪಡಿಸಿದೆ. ನಗರದ ಜನರಿಗೆ ತೊಂದರೆ ನೀಡುವ ಉದ್ದೇಶದಿಂದ ಉದ್ಘಾಟನೆ ಮಾಡದೇ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ. ಅಲ್ಲದೆ, ರಸ್ತೆಯಲ್ಲಿ ಅಳವಡಿಸಿದ ಗ್ರಿಲ್‌ ಅನ್ನು ರಾತ್ರೋರಾತ್ರಿ ಬೇರೆಡೆ ಸ್ಥಳಾಂತರಿಸಿ ಕಾಮಗಾರಿ ಬಾಕಿಯಿದೆ ಎನ್ನುವುದನ್ನು ತೋರಿಸಲಾಗುತ್ತಿದೆ ಎಂದು ದೂರಿದರು. ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವು ಮಾಡಲು ಬಿಜೆಪಿ ಮುಖಂಡರು ಯತ್ನಿಸಿದರು. ಇದೇ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಬ್ಯಾರಿಕೇಡ್‌ ತೆರವು ಕಾನೂನು ವಿರುದ್ಧವಾಗಿದೆ ಎಂದು ಪೊಲೀಸರು ತಿಳಿಸುತ್ತಿದ್ದಂತೆ ಬಳ್ಳಾರಿಯಲ್ಲಿ ಕಾನೂನು ಇದೆನಾ?. ನಗರದಲ್ಲಿನ ಎಲ್ಲ ರಸ್ತೆಗಳನ್ನು ಸಂಪೂರ್ಣ ಬಂದ್‌ ಮಾಡಲಿ. ರೈಲ್ವೆ ಇಲಾಖೆ ಕಾಮಗಾರಿ ಬಾಕಿ ಬಗ್ಗೆ ಬ್ಯಾನರ್‌ ಹಾಕಿದ್ದು ಯಾರು?. ರಸ್ತೆ ಬಂದ್‌ನಿಂದಾಗಿ ಟ್ರಾಫಿಕ್‌ ಪೊಲೀಸರು ಸಹ ಟ್ರಾಫಿಕ್‌ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗಿದೆ ಎಂದು ಪ್ರತಿಭಟನಕಾರರು ವಾಗ್ವಾದಕ್ಕಿಳಿದರು. ಕೂಡಲೇ ಮಹನಗರ ಪಾಲಿಕೆ ಅಧಿಕಾರಿಗಳು ಕೆಳ ಸೇತುವೆ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಬಿಜೆಪಿ ಮುಖಂಡರು ಎಚ್ಚರಿಸಿದರು.

ಈ ವೇಳೆ ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಹನುಮಂತ, ಮೋತ್ಕರ್‌ ಶ್ರೀನಿವಾಸ್‌, ಮುಖಂಡರಾದ ಎಚ್‌.ಹನುಮಂತಪ್ಪ, ಗೋನಾಳ್‌ ವಿರೂಪಾಕ್ಷಗೌಡ, ಎಸ್‌.ಮಲ್ಲನಗೌಡ, ಸುಗುಣಾ ಸೇರಿದಂತೆ ಮಹಿಳಾ ಬಿಜೆಪಿ ಕಾರ್ಯಕರ್ತರು ಇದ್ದರು.